ಹಾವೇರಿ: ಕಳೆದ ಕೆಲ ದಿನಗಳಿಂದ ಹಾವೇರಿ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದೆ. ಇದರ ಮಧ್ಯೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ರೈತರ ಬೆಳೆಗಳಿಗೆ ನಷ್ಟವಾಗಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಿರೂರು ಗ್ರಾಮದ ಮಲ್ಲಪ್ಪ ಬಡಿಗೇರ್‌ಗೆ ಸೇರಿದ ಒಂದೂವರೆ ಎಕರೆ ಮೆಣಸಿನಕಾಯಿ ಬೆಳೆ ನೀರುಪಾಲಾಗಿದೆ.
ಅಕಾಲಿಕ ಮಳೆಯಿಂದಾಗಿ ರೈತ ಮಲ್ಲಪ್ಪನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮೆಣಸಿನಕಾಯಿ ಸಸಿ,ಗೊಬ್ಬರ,ಔಷಧಿ, ಕೂಲಿ ಕಾರ್ಮಿಕರ ಸಂಬಳ ಸೇರಿದಂತೆ ಎಕರೆಗೆ 60 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಕೆಲ ದಿನಗಳಲ್ಲಿ ಫಸಲು ಬಂತು ಎನ್ನುವಷ್ಟರಲ್ಲಿ ಸುರಿದ ಮಳೆಯಿಂದಾಗಿ ಎಲ್ಲವೂ ನೀರುಪಾಲಾಗಿದೆ.
ಈಗಾಗಲೇ ಕೊರೊನಾದಿಂದ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಇದರ ಮಧ್ಯೆ ಬರುವ ಬೆಳೆಯಿಂದ ಹೇಗಾದರೂ ಮಾಡಿ ಖರ್ಚು ವಾಪಸ್ ಪಡೆಯುವ ರೈತನ ಕನಸು ಸಹ ಇದೀಗ ನುಚ್ಚುನೂರಾಗಿದೆ. ಸಾಲ, ಆಭರಣ ಒತ್ತೆಯಿಟ್ಟು ಮೆಣಸಿನಕಾಯಿ ಬೆಳೆ ಬೆಳೆದಿದ್ದೆ. ಆದರೆ ಇದೀಗ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ರೈತರು ಹೇಗೆ ಬದುಕಬೇಕು? ಎಂದು ತಮ್ಮ ಗೋಳು ಹೊರಹಾಕಿದ್ದಾರೆ.
ನಮ್ಮ ಬೆಳೆ ಹಾಳು ಆದರೆ ಎರಡು-ಮೂರು ಸಾವಿರ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಾರೆ. ಆದರೆ ಸಾವಿರಾರು ರೂ. ಅದಕ್ಕಾಗಿ ಖರ್ಚು ಮಾಡಿರುತ್ತೇವೆ. ಸಮರ್ಕಕ ಪರಿಹಾರ ನೀಡುವಂತೆ ಕೃಷಿ ಸಚಿವರಿಗೆ ಆಗ್ರಹಿಸಿದ್ದಾರೆ.