ಹಾವೇರಿ: ಹಾವು-ಮುಂಗುಸಿ ಸೆಣಸು ಸಹಜ. ಇಲ್ಲೊಂದು ಶ್ವಾನ ಹಾವುಗಳೊಂದಿಗೆ ಹೋರಾಡಿ ಕೂಲಿ ಕಾರ್ವಿುಕರನ್ನು ರಕ್ಷಿಸುತ್ತಿದೆ. ಹಾವೇರಿ ತಾಲೂಕಿನ ಅಕ್ಕೂರು ಗ್ರಾಮದಲ್ಲಿ ದಯಾನಂದ ಕಲಕೋಟಿ ಎಂಬವರು ಸಾಕಿದ 'ಸುಹಾನಿ' ಎಂಬ ಶ್ವಾನ ಇಲ್ಲಿಯವರೆಗೆ 28 ಹಾವುಗಳೊಂದಿಗೆ ಗುದ್ದಾಡಿ ಎಲ್ಲವನ್ನೂ ಕೊಂದು ಹಾಕಿ ಜನರನ್ನು ರಕ್ಷಣೆ ಮಾಡುತ್ತಿದೆ.
ದಯಾನಂದ ಕಲಕೋಟಿ 20 ಎಕರೆ ಜಮೀನಿನಲ್ಲಿ ಸಾವಯುವ ಕೃಷಿ ಮಾಡಿಕೊಂಡು ಬಂದಿದ್ದಾರೆ. 7 ಎಕರೆ ಜಮೀನಿಲ್ಲಿ ತಾಳೆ ಮರ ಹಾಕಿದ್ದಾರೆ. ತಾಳೆ ಮರದಲ್ಲಿ ಎಣ್ಣೆಯ ಅಂಶವಿರುವುದರಿಂದ ಇಲಿಗಳ ಕಾಟ ಹೆಚ್ಚು. ಹಾಗಾಗಿ ನಾಗರಹಾವು ಸೇರಿದಂತೆ ವಿವಿಧ ಹಾವುಗಳು ಜಮೀನಿಗೆ ಲಗ್ಗೆ ಹಾಕುತ್ತಿವೆ. ಈ ತೋಟವನ್ನು ನೋಡಿಕೊಳ್ಳಲು ದಯಾನಂದ ಐದು ಜನರನ್ನು ಕೆಲಸಕ್ಕಿಟ್ಟುಕೊಂಡಿದ್ದಾರೆ. ಸುಹಾನಿ ಜಮೀನಿನ ಜತೆಗೆ ಈ ಐದು ಜನರ ರಕ್ಷಣೆ ಮಾಡುತ್ತಿದೆ.
ಇಲ್ಲಿಯವರೆಗೆ ಈ ಶ್ವಾನ 12 ನಾಗರ, 11 ಕೆರೆ ಹಾವು ಹಾಗೂ 5 ಕಂದಲಿಕೆ ಹಾವುಗಳನ್ನು ಕೊಂದು ತೋಟದ ರಕ್ಷಣೆಗೆ ನಿಂತಿದೆ. ಅಲ್ಲದೇ, 28 ಬಾರಿ ಸೆಣಸಾಟದಲ್ಲಿ 2 ಬಾರಿ ನಾಗರ ಹಾವಿನೊಂದಿಗೆ ಕಚ್ಚಿಸಿಕೊಂಡು ಬದುಕುಳಿದಿದೆ. ಸುಹಾನಿಗೆ ಹಾವು ಕಡಿದ ವಿಷಯ ತಿಳಿದ ಕೂಲಿ ಕಾರ್ಮಿಕರು ದೂರದ ಗುತ್ತಲಕ್ಕೆ ಹೋಗಿ ಔಷಧಿ, ಚುಚ್ಚುಮದ್ದು ತಂದು ಪ್ರಾಣ ಉಳಿಸಿದ್ದಾರೆ.
ನಿತ್ಯ ಸುಹಾನಿಗೆ ಸಸ್ಯಹಾರ ನೀಡಲಾಗುತ್ತದೆ. ಯಾವಾಗಲಾದರೂ ಒಮ್ಮೆ ಮಾಂಸಹಾರ ನೀಡುತ್ತಾರೆ. ಸುಹಾನಿ ಜೊತೆ 30 ಕೋಳಿ, ಮೇಕೆಗಳನ್ನು ಕೂಲಿ ಕಾರ್ಮಿಕರು ಸಾಕಿದ್ದಾರೆ. ಈ ಕೋಳಿ, ಮೇಕೆಗಳು ಹಾಗೂ ಜನರ ಧ್ವನಿ ವಿಭಿನ್ನವಾದರೆ ಸಾಕು ಸುಹಾನಿ ಅಲ್ಲಿಗೆ ಧಾವಿಸುತ್ತದೆ.
ಸುಹಾನಿ ತಾನು ಗರ್ಭಿಣಿಯಾದಾಗಲೂ ಈ ಕಾಯಕ ಬಿಟ್ಟಿಲ್ಲ. ಎರಡು ಹಾವಿನಿಂದ ಕೂಲಿ ಕಾರ್ಮಿಕರ ರಕ್ಷಣೆ ಮಾಡಿದ ಎರಡು ದಿನಕ್ಕೆ ಏಳು ಮರಿಗಳಿಗೆ ಜನ್ಮ ನೀಡಿದೆ. ಅದರಲ್ಲಿ ಐದು ಹೆಣ್ಣು ಮತ್ತು ಎರಡು ಗಂಡು ಮರಿಗಳಿದ್ದು ಆರೋಗ್ಯವಾಗಿವೆ ಎನ್ನುತ್ತಾರೆ ಮಾಲೀಕ ದಯಾನಂದ ಕಲಕೋಟಿ.
ಇದನ್ನೂ ಓದಿ: Video: ನಾಗರಹಾವು - ನಾಯಿ ನಡುವೆ ಘೋರ ಕಾದಾಟ: ಕೊನೆಗೆ ಪ್ರಾಣ ಬಿಟ್ಟ ಎರಡೂ ಜೀವಗಳು