ಹಾವೇರಿ : ಮಾಜಿ ಸಚಿವ ರಮೇಶ ಜಾರಕಿಹೊಳಿ ಗೂಂಡಾಗಳ ಬಗ್ಗೆ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ವ್ಯಂಗ್ಯವಾಡಿದರು.
ನಗರದಲ್ಲಿ ಮಾತನಾಡಿದ ಅವರು, 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ದಿಕ್ಸೂಚಿ ಕಾಣಿಸುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಆಯ್ಕೆಯಾದ ಶಾಸಕರು, ಸಿಎಂ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ನಂತರ ವರಿಷ್ಠರು ಸಮ್ಮತಿಸುತ್ತಾರೆ ಎಂದು ಹರಿಪ್ರಸಾದ ತಿಳಿಸಿದರು.
ಮಾಧ್ಯಮಗಳಲ್ಲಿ ಯಾವ ವಿಷಯ ಇಲ್ಲದೆ ಇದ್ದಾಗ ಕಾಂಗ್ರೆಸ್‌ನಲ್ಲಿ ಸಿಎಂ ಅಭ್ಯರ್ಥಿ ಕುರಿತಂತೆ ಗುದ್ದಾಟವಿದೆ ಎಂದು ಚರ್ಚಿಸಲಾಗುತ್ತದೆ. ದಿನದಿಂದ ದಿನಕ್ಕೆ ವಿಧಾನಪರಿಷತ್ ಘನತೆ-ಗೌರವ ಕಡಿಮೆಯಾಗುತ್ತಿದೆ. ಅದು ಮುಂದೆ ಸರಿಯಾಗುತ್ತದೆ ಎಂದರು.
ಹೆಣದ ಮೇಲೆ ಹೊಂದಾಣಿಕೆ : ಕಾಂಗ್ರೆಸ್, ಆರ್ಎಸ್ಎಸ್ ಮತ್ತು ಬಿಜೆಪಿ ಜೊತೆ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳುವುದಿಲ್ಲ. ಒಂದು ವೇಳೆ ಮಾಡಿಕೊಂಡು ನಮ್ಮಂತವರ ಹೆಣದ ಮೇಲೆ ಎಂದು ಹರಿಪ್ರಸಾದ್ ಸ್ಪಷ್ಟಪಡಿಸಿದರು. ಹಾಗೂ ಮಮತಾ ಬ್ಯಾನರ್ಜಿ ಏನು ಎನ್ನುವುದು ನನಗೆ ಗೊತ್ತಿದೆ, ಅವರು ಯಾವಾಗಲೂ ಯುಪಿಎದಲ್ಲಿ ಇರಲಿಲ್ಲ ಎಂದು ತಿಳಿಸಿದರು.
ಬಿಜೆಪಿ ಪರ್ಸೆಂಟೇಜ್ ಸರ್ಕಾರ : ಪರ್ಸೆಂಟೇಜ್ ವಿಷಯದಲ್ಲಿ ಕಾಂಗ್ರೆಸ್‌ನವರು ತಾಯಿ ಎನ್ನುವ ಬಿಜೆಪಿಯವರು ಮುತ್ತಜ್ಜರು. ಪ್ರಧಾನಿ ನರೇಂದ್ರ ಮೋದಿ ಮಾನ, ಮರ್ಯಾದೆ, ನಾಚಿಕೆ ಇದ್ದರೆ ರಾಜ್ಯದಲ್ಲಿರುವ ಪರ್ಸೆಂಟೇಜ್ ಸರ್ಕಾರ ತೆಗೆಯಲಿ.
ಬಿಜೆಪಿ ಸರ್ಕಾರ ಕೊರೊನಾ ಸಮಯದಲ್ಲಿ ಹಣ ಲೂಟಿ ಮಾಡಿತು. ಹೆಣಗಳನ್ನ ಸುಡಲು ಯೋಗ್ಯತೆ ಇಲ್ಲದ ಸರ್ಕಾರ ಇದಾಗಿದೆ. ಕಾಂಗ್ರೆಸ್ ಮುಖಂಡರು ರಾಷ್ಟ್ರೀಕರಣಗೊಳಿಸಿದರೆ, ಬಿಜೆಪಿಯವರು ಖಾಸಗೀಕರಣಗೊಳಿಸುತ್ತಿದ್ದಾರೆ ಎಂದು ಹರಿಪ್ರಸಾದ ಅಭಿಪ್ರಾಯಪಟ್ಟರು.
ಉಪಚುನಾವಣೆಯಲ್ಲಿ ಜನರು ಪಾಠ ಕಲಿಸಿದ್ದಕ್ಕೆ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಿದ್ದಾರೆ. ರೈತರನ್ನು ಬಿಜೆಪಿಯವರು ತುಚ್ಛವಾಗಿ ನೋಡುವುದು ಹೊಸದೇನಲ್ಲ. ಅದರ ಪಿತಾಮಹ ಮಾಜಿ ಸಿಎಂ ಬಿ. ಎಸ್.ಯಡಿಯೂರಪ್ಪ ಎಂದು ಹರಿಪ್ರಸಾದ್ ಆರೋಪಿಸಿದರು. ಕೊರೊನಾ ಪಿಎಂ ಕೇರ್ಸ್‌ಗೆ ಬಂದ ಹಣದ ಬಗ್ಗೆ ಪ್ರಧಾನಿಯವರು ಮಾಹಿತಿ ನೀಡುತ್ತಿಲ್ಲಾ ಎಂದು ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.