ಹಾವೇರಿ/ ಹಾನಗಲ್: ಕೋವಿಡ್-19 ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ಕುರಿತು ಅನೇಕರು ಜಾಗೃತಿ ಮೂಡಿಸುತ್ತಿದ್ದಾರೆ. ಪೊಲೀಸ್ ಕಾನ್ಸ್ಟೆಬಲ್ವೊಬ್ಬರು ಕರ್ತವ್ಯದ ಮಧ್ಯೆಯೇ ಕೊರೊನಾ ಕುರಿತು ಜಾಗೃತಿ ಗೀತೆಯೊಂದನ್ನು ಹಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹುರೇಕಣಗಿ ಗ್ರಾಮದ ಡಾ. ಆನಂದ ದೊಡ್ಡಕುರುಬರವರು ಹಾವೇರಿ ಜಿಲ್ಲೆಯ ಸೈಬರ್ ಕ್ರೈಂ ನಲ್ಲಿ ಕಾನ್ಸ್ಟೆಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಪೊಲೀಸ್ ಕರ್ತವ್ಯದ ಜೊತೆಗೆ ಸಾಹಿತ್ಯದ ಕುರಿತು ಆಸಕ್ತಿಯನ್ನ ಬೆಳಿಸಿಕೊಂಡಿದ್ದಾರೆ. ಕೊರೊನಾ ಕುರಿತು ತಾವೇ ಸ್ವತಃ ಹಾಡನ್ನು ರಚಿಸಿ, ಹಾಡಿ ಜಾಗೃತಿ ಮೂಡಿಸುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ..
ಈಗಾಗಲೇ ಇವರ ಕೈಯ್ಯಲ್ಲಿ ಮೂರು ಪುಸ್ತಕಗಳು ರಚನೆಯಾಗಿ ಬಿಡುಗಡೆಯಾಗಿದೆ. ಕನಕ ಪ್ರಶಸ್ತಿ, ಡಾಕ್ಟರೇಟ್ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಸಹ ಮುಡಿಗೇರಿಸಿಕೊಂಡಿದ್ದಾರೆ. ಇವರ ಕಾರ್ಯಕ್ಕೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ, ಸಂಬಂಧಿಗಳು, ಸಾರ್ವಜನಿಕರು, ಜಿಲ್ಲೆಯ ಸಾಹಿತಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.