ರಾಣೆಬೆನ್ನೂರು: ಅಂಬೇಡ್ಕರ್ ಹಾಗೂ ಬಸವ ವಸತಿ ಯೋಜನೆಗಳಡಿ ಮನೆ ನಿರ್ಮಿಸಿಕೊಳ್ಳಲು ಫಲಾನುಭವಿಗಳಿಗೆ ಸರ್ಕಾರ ಮತ್ತೊಂದು ಅವಕಾಶ ನೀಡಿದೆ.
ವಿವಿಧ ಕಾರಣಗಳಿಂದ ಸರ್ಕಾರ ವಸತಿ ಯೋಜನೆಗಳನ್ನು ಸ್ಥಗಿತ ಮಾಡಿತ್ತು. ಇದರಿಂದ ರಾಣೆಬೆನ್ನೂರು ತಾಲೂಕಿನ ಸುಮಾರು 2,423 ಮನೆಗಳ ನಿರ್ಮಾಣಕ್ಕೆ ತಡೆ ಹಿಡಿಯಲಾಗಿತ್ತು. ಈಗ ಸರ್ಕಾರ ಮತ್ತೊಂದು ಅವಕಾಶ ನೀಡಿದ್ದು, ಆಯ್ಕೆಯಾದ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡಿದೆ.
2016-17ನೇ ಸಾಲಿನ ಬಸವ ವಸತಿ ಯೋಜನೆಯ 289 ಮನೆಗಳು ಹಾಗೂ 2017-18ನೇ ಸಾಲಿನ ಬಸವ ವಸತಿ ಮತ್ತು ಅಂಬೇಡ್ಕರ್ ವಸತಿ ಯೋಜನೆಯ ಸುಮಾರು 2,134 ಸೇರಿ ಒಟ್ಟು 2,423 ಮನೆಗಳನ್ನು ನಿರ್ಮಿಸಿಕೊಳ್ಳಲು ಅನುಮತಿ ನೀಡಲಾಗಿದೆ. ಮಾರ್ಚ್ 14ರ ಒಳಗೆ ಮನೆಯ ಅಡಿಪಾಯ ಹಾಕಿಕೊಂಡು ಸರ್ಕಾರದಿಂದ ಸಿಗುವ ಸಹಾಯಧನವನ್ನು ಪಡೆದುಕೊಳ್ಳುವಂತೆ ವಸತಿ ನಿಗಮದಿಂದ ಫಲಾನುಭವಿಗಳಿಗೆ ಆದೇಶ ಹೊರಡಿಸಲಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಎಸ್.ಎಂ.ಕಾಂಬಳೆ ತಿಳಿಸಿದ್ದಾರೆ.