ರಾಣೆಬೆನ್ನೂರು/ಹಾವೇರಿ : ನೆರೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ಆರೋಪ ಕೇಳಿ ಬಂದ ಹಿನ್ನೆಲೆ ತಹಶೀಲ್ದಾರ್ ಬಸವನಗೌಡ ಕೋಟೂರು ಸೇರಿ ಆರು ಜನರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್ ಯೋಗೇಶ್ವರ ದೂರು ದಾಖಲಿಸಿದ್ದಾರೆ.
ತಹಶೀಲ್ದಾರ್ ಬಸವನಗೌಡ ಕೋಟೂರು, ಸಹಾಯಕ ಕೃಷಿ ನಿರ್ದೇಶಕ ಎಂ ಬಿ ಗೌಡಪ್ಪಳವರ, ತೋಟಗಾರಿಕೆ ಇಲಾಖೆ ಹಿರಿಯ ಉಪ ನಿರ್ದೇಶಕ ನೂರ್ ಅಹ್ಮದ್ ಹಲಗೇರಿ, ತಹಶೀಲ್ದಾರ್ ಕಚೇರಿಯ ಡಾಟಾ ಎಂಟ್ರಿ ಆಪರೇಟರ್, ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕ ಸೇರಿ 6 ಜನರ ವಿರುದ್ಧ ಐಪಿಸಿ ಸೆಕ್ಷೆನ್ 420, 406, 408, 409, 465 ಕಲಂ ಅಡಿ ದೂರು ದಾಖಲಾಗಿದೆ. ತಾಲೂಕಿನ ನೆರೆ ಸಂತ್ರಸ್ತರು ನಿಜವಾದ ಫಲಾನುಭವಿಗಳಿಗೆ ಆರ್‌ಟಿಸಿಯಲ್ಲಿರುವ ಭೂ ಮಾಲೀಕರಿಗೆ ಬೆಳೆಹಾನಿ ಪರಿಹಾರ ಮಂಜೂರು ಮಾಡದೇ, ಮೋಸದಿಂದ ಅನರ್ಹ ಫಲಾನುಭವಿಗಳಿಗೆ ಕಾನೂನು ಬಾಹಿರ ಪರಿಹಾರ ವಿತರಣೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಡಾಟಾ ಆಪರೇಟರ್‌ಗಳು ಲಾಗಿನ್ ಐಡಿ ಬಳಸಿ ಕಾನೂನು ಸಮ್ಮತವಲ್ಲದ ವ್ಯಕ್ತಿಗಳಿಗೆ ಪರಿಹಾರ ನೀಡಿ ನಂಬಿಕೆ ದ್ರೋಹ ಮಾಡಿ ಸರ್ಕಾರಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ರಾಣೆಬೆನ್ನೂರು ತಾಲೂಕಿನ 838ಕ್ಕೂ ಅಧಿಕ ಪ್ರಕರಣದಲ್ಲಿ ಗೋಲ್‌ಮಾಲ್ ಮಾಡಿ ಹಣ ಪಾವತಿಯಾಗಿರುವುದು ಕಂಡು ಬಂದಿದೆ. ಸರ್ಕಾರದ ನಿಯಮಾವಳಿ ಪ್ರಕಾರ ನೆರೆ ಸಂತ್ರಸ್ತರ ಕುರಿತು ಸಮಗ್ರ ಮಾಹಿತಿಯನ್ನು ಪರಿಹಾರ ಸಾಫ್ಟ್‌ವೇರ್‌ಗೆ ಅಪ್‌ಲೋಡ್ ಮಾಡಿದ ಬಳಿಕ ‘ಮ್ಯಾಚ್ ಸ್ಕೋರ್-1.5’ ಎಂದು ಬರುತ್ತದೆ. ಅಂತಹ ಫಲಾನುಭವಿಗೆ ಪರಿಹಾರ ನೀಡಬಹುದು.
ಆದರೆ, ರಾಣೆಬೆನ್ನೂರಿನಲ್ಲಿ ‘ಮ್ಯಾಚ್ ಸ್ಕೋರ್-0’ ಎಂದು ಬಂದವರಿಗೂ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. ‘ಮ್ಯಾಚ್ ಸ್ಕೋರ್-0’ ಎಂದು ಬಂದಾಗ ಅಥವಾ ‘ಮ್ಯಾಚ್ ಸ್ಕೋರ್-1.5’ ಎಂದು ಬಂದಾಗ ಅದನ್ನು ಮರು ಪರಿಶೀಲನೆಗೆ ಕಳುಹಿಸಬೇಕು. ಬದಲಾಗಿ ರಾಣೆಬೆನ್ನೂರಿನ ತಹಶೀಲ್ದಾರರು, ಗ್ರಾಮ ಲೆಕ್ಕಾಧಿಕಾರಿಗಳು ಅನುಮೋದನೆ ನೀಡಿದ್ದಾರೆ. ಇದು ಅವ್ಯವಹಾರ ನಡೆಸಲು ಕಾರಣವಾಗಿದೆ. ಕಂಪ್ಯೂಟರ್ ಆಪರೇಟರ್‌ಗಳು ಬೇರೆಯವರ ಆಧಾರ್ ಸಂಖ್ಯೆ ಹಾಗೂ ಖಾತೆಗೆ ಹಣ ಮಂಜೂರು ಮಾಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ ದೂರಿನಲ್ಲಿ ಆರೋಪಿಸಿದ್ದಾರೆ.