ಹಾವೇರಿ: ನೆರೆ ಪರಿಹಾರ ವಿತರಣೆಯಲ್ಲಿ ನಡೆದ ಅಕ್ರಮದಲ್ಲಿ ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಮೂವರನ್ನು ರಾಣೆಬೆನ್ನೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ 2018-19ರಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಬಸವರಾಜ ಅಪ್ಪಸ್ವಾಮಿ ಹೊನ್ನರು(22)ನನ್ನು ಬಂಧಿಸಲಾಗಿದೆ. ಈತ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸಿ ಜೂನ್ 6, 2019ರಂದು ಗ್ರಾಮ ಲೆಕ್ಕಾಧಿಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾನೆ. ಬಳಿಕ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದನು. ಈ ಸಮಯದಲ್ಲಿ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ರೈತರಿಗೆ ನೀಡಬೇಕಾದ ನೆರೆ ಪರಿಹಾರದಲ್ಲಿ ಸರ್ಕಾರದ ಲಾಗಿನ್ ಐಡಿ ಬಳಸಿಕೊಂಡು ಸುಮಾರು 60 ಸಾವಿರ ಹಣವನ್ನು ತನ್ನ ಸ್ನೇಹಿತರ ಖಾತೆಗೆ ವರ್ಗಾವಣೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಈ ಆಧಾರದ ಮೇಲೆ ರಾಣೆಬೆನ್ನೂರು ಗ್ರಾಮಾಂತರ ಪೋಲಿಸರು ಆರೋಪಿ ಬಸವರಾಜ ಹೊನ್ನೂರ ಸೇರಿದಂತೆ ಹಣ ಹಾಕಿಸಿಕೊಂಡ ಬಸವರಾಜ ಏಳೂರು, ಶಿವಾನಂದ ಏಳೂರು, ಅಮೀತ್ ವೆಂಕಪ್ಪಗೊಳ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.