ಹಾವೇರಿ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ಹೊರ ವಲಯದಲ್ಲಿ ನಡೆದಿದೆ. ಗುಜರಾತ್ ಮತ್ತು ಕೇರಳ ಮೂಲದ ಕಾರುಗಳ ನಡುವೆ ರಾಣೆಬೆನ್ನೂರು ನಗರದ ಹೊರವಲಯದಲ್ಲಿರುವ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಅಪಘಾತ ಘಟಿಸಿದೆ.
ಗುಜರಾತ್ ಮೂಲದ ದಿನೇಶ್ ಬಾಯ್ (38), ಲತೀಶ್ ಬಾಯ್ (37) ಸುರೇಶ್ ಬಾಯ್ (39) ಮತ್ತು ಕೇರಳ ಮೂಲದ ಸಾಹಲ್ (37) ಮೃತರು. ಘಟನೆಯಲ್ಲಿ ಗಾಯಾಗೊಂಡ ಕೇರಳ ಮೂಲದ ದಾನೇಶ್ ಮತ್ತು ಜೈನಾಬಿ ಹಾಗೂ ಗುಜರಾತ್ ಮೂಲದ ಅಶ್ವಿನ್ ಎಂಬುವವರನ್ನು ರಾಣೆಬೆನ್ನೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದಾವಣಗೆರೆ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತ್ಯಂತ ವೇಗವಾಗಿ ಹೊರಟಿದ್ದ ಗುಜರಾತ್ ಮೂಲದ ಕಾರಿನ ಟೈರ್ ಬರ್ಸ್ಟ್ ಆಗಿದೆ. ಪರಿಣಾಮವಾಗಿ ಕಾರು ರಸ್ತೆ ನಡುವಿನ ಡಿವೈಡರ್ಗೆ ಡಿಕ್ಕಿ ಹೊಡೆದು ಎದುರಾಗಿ ವಾಹನಗಳು ಬರುತ್ತಿದ್ದ ರಸ್ತೆಗೆ ಉರುಳಿದೆ. ಅದೇ ಸಮಯಕ್ಕೆ ಸರಿಯಾಗಿ ಹುಬ್ಬಳ್ಳಿ ಕಡೆಯಿಂದ
ದಾವಣಗೆರೆ ಕಡೆಗೆ ಹೊರಟಿದ್ದ ಕೇರಳ ಮೂಲದ ಕಾರು ಬಂದಿದೆ. ಗುಜರಾತ್ ಮೂಲದ ಕಾರು ಪಲ್ಟಿ ಹೊಡೆದು ಕೇರಳ ಮೂಲದ ಕಾರಿನ ಮೇಲೆ ಬಿದ್ದಿದೆ.
ಎರಡು ಕಾರುಗಳ ನಡುವಿನ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಎಸ್ಪಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ವಿಜಯಕುಮಾರ, ಸಿಪಿಐ ಮುತ್ತಪ್ಪ ಗೌಡಪ್ಪ ಗೌಡರ ಹಾಗೂ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪಂಪ್ ಸೆಟ್ ಕದಿಯಲು ಹೋದವರು ಶವವಾಗಿ ಪತ್ತೆ: ಆರೋಪಿಗಳಿಗೆ ಶೋಧ