ಹಾವೇರಿ: ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವ ಹಿನ್ನೆಲೆ ಬಿಬಿಎಂಪಿ ಪ್ರಧಾನ ಇಂಜಿನಿಯರ್ ಪ್ರಹ್ಲಾದ್ ಮತ್ತು ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರನ್ನು ಬಂಧಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ.
ಇಂದು ಹಾವೇರಿಯಲ್ಲಿ ಮಾತನಾಡಿದ ಅವರು, "ಈ ಇಬ್ಬರನ್ನು ಬಂಧಿಸಿದರೆ ಅವರು ಬಾಯಿ ಬಿಡುತ್ತಾರೆ. ಯಾರ್ಯಾರ ಹೆಸರಿನಲ್ಲಿ ಎಷ್ಟೆಷ್ಟು ಸಂಗ್ರಹ ಮಾಡಿದ್ದಾರೆ ಎಂಬುದು ತಿಳಿಯುತ್ತದೆ. ಡಿಸಿಎಂ ಡಿ.ಕೆ. ಶಿವಕುಮಾರ್ಗೆ ಎಷ್ಟು ಹಣ ಕೊಟ್ಟಿದ್ದಾರೆ ಎಲ್ಲವೂ ಗೊತ್ತಾಗುತ್ತದೆ. ಕೆಂಪಣ್ಣ ನೇರವಾಗಿ ಆರೋಪ ಮಾಡಿದ್ದಾರೆ. ಈ ಕುರಿತಂತೆ ಪತ್ರಿಕೆಗಳಲ್ಲಿ ವರದಿ ಸಹ ಬಂದಿದೆ. ಇದಕ್ಕಿಂತ ಬೇರೆ ದಾಖಲಾತಿಗಳು ಬೇಕೆ?" ಎಂದು ಪ್ರಶ್ನಿಸಿದರು.
"ಈ ಸರ್ಕಾರ ಬಂದಾಗಿನಿಂದ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಎಲ್ಲಿ ಹೋದರೂ ಭ್ರಷ್ಟಾಚಾರ. ಒಂದೊಂದು ವರ್ಗಾವಣೆಗೆ ಕೋಟ್ಯಂತರ ಹಣ ತೆಗೆದುಕೊಳ್ಳುತ್ತಿದ್ದಾರೆ. ಈ ಕುರಿತಂತೆ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರು ಅಥವಾ ಹಾಲಿ ನ್ಯಾಯಾಧೀಶರ ನೇಮಕ ಮಾಡಿ ತನಿಖೆ ನಡೆಸುವಂತೆ ಕೇಳಿಕೊಂಡಿದ್ದೆ. ಆದರೆ ಈ ಬಗ್ಗೆ ರಾಜ್ಯ ಸರ್ಕಾರ ಗಮನ ಕೊಟ್ಟಿಲ್ಲ" ಎಂದರು.
"ಕೆಂಪಣ್ಣ ಆರೋಪ ಮಾಡಿರುವ ಬಗ್ಗೆ ಪ್ರಹ್ಲಾದ್ ಅವರನ್ನು ಯಾವ ರೀತಿ ತನಿಖೆ ಮಾಡಿದರೆ ಒಳ್ಳೆಯದು ಎಂಬುದು ಸಿಎಂ ಸಿದ್ದರಾಮಯ್ಯರಿಗೆ ಬಿಟ್ಟಿದ್ದು. ಇಷ್ಟೆಲ್ಲಾ ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಸರ್ಕಾರವೇ ಭ್ರಷ್ಟಾಚಾರಕ್ಕೆ ಲೈಸೆನ್ಸ್ ನೀಡಿದಂತಾಗುತ್ತದೆ. ಅಟೆಂಡರ್ ಹುದ್ದೆಯಿಂದ ಹಿಡಿದು ಉನ್ನತಾಧಿಕಾರಿಗಳವರೆಗೆ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆತಿದೆ" ಎಂದು ಆರೋಪಿಸಿದರು.
"ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುವುದಾಗಿ ಹೇಳಿ ಅಲ್ಲಿ ವಿಫಲವಾಗಿದ್ದೀರಿ. ವಿದ್ಯುತ್ ಸೇರಿದಂತೆ ಐದು ಗ್ಯಾರಂಟಿಗಳಲ್ಲಿ ಬಸ್ ಓಡಿಸುವುದನ್ನು ಬಿಟ್ಟರೆ ಯಾವ ಗ್ಯಾರಂಟಿ ಯಶಸ್ವಿಯಾಗಿಲ್ಲ" ವ್ಯಂಗವಾಡಿದರು.
ಇದನ್ನೂ ಓದಿ: ಡಿ ಕೆ ಶಿವಕುಮಾರ್ ಸಿಎಂ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ: ಮದ್ದೂರು ಶಾಸಕ ಕದಲೂರು ಉದಯ್
"ಈ ವರ್ಷದಂತಹ ಬರಗಾಲವನ್ನು ನಾನು ಹುಟ್ಟಿದಾಗಿನಿಂದ ನೋಡಿಲ್ಲ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಈ ಕಡೆ ಗಮನ ಹರಿಸುತ್ತಿಲ್ಲ. ಸಿಎಂ, ಡಿಸಿಎಂ, ಸಚಿವ ಯಾರೊಬ್ಬರು ರೈತರ ಹೊಲಗಳಿಗೆ ಹೋಗಿಲ್ಲ. ಯಾವ ರೈತನನ್ನು ಕೂಡ ಮಾತನಾಡಿಸಿಲ್ಲ. ಸರ್ವೇ ಮಾಡುವದರಲ್ಲಿ ಸಹ ವಿಳಂಬ ಮಾಡಿದ್ದಾರೆ. ಸರ್ವೆ ಮಾಡಿ ಬರಗಾಲ ಪೀಡಿತ ಪ್ರದೇಶಗಳ ಆಯ್ಕೆಯಲ್ಲಿ ತಡ ಮಾಡಿದರೆ ರೈತರಿಗೆ ಯಾವ ರೀತಿ ಪರಿಹಾರ ನೀಡುತ್ತಾರೆ?. ರಾಜ್ಯದಲ್ಲಿ 250 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ ಯಾರಿಗೆ ಪರಿಹಾರ ನೀಡಿದ್ದೀರಿ? ಯಾವ ರೈತರಿಗೆ ಬೆಳೆ ಪರಿಹಾರ ನೀಡಿದ್ದೀರಿ?. ಕೂಡಲೇ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಿಎಂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
"ಬರಗಾಲ ಬಂದಿರುವುದು ರಾಜ್ಯಕ್ಕೆ. ಈ ಸಂದರ್ಭದಲ್ಲಿ ಎಷ್ಟು ಬೆಳೆ ನಷ್ಟವಾಗಿದೆ ಎಂಬ ಅಂಕಿ-ಅಂಶ ಇವರ ಬಳಿ ಇರಬೇಕು. ಕೇಂದ್ರ ತಂಡ ಬಂದು ಹೋದ ನಂತರ ಅಂಕಿ ಸಂಖ್ಯೆ ಸಂಗ್ರಹಿಸುತ್ತಿದ್ದಾರೆ. ಕೇಂದ್ರ ರಾಜ್ಯ ಸರ್ಕಾರ ಅಂತ ಇಲ್ಲಿ ರಾಜಕಾರಣ ಮಾಡುವುದು ಬೇಡ. ಸಿಎಂ ಸಿದ್ದರಾಮಯ್ಯ ಕರ್ನಾಟಕ ರಾಜ್ಯದ ಯಜಮಾನ. ಇವರು ಮೊದಲು ರೈತರಿಗೆ ಪರಿಹಾರ ನೀಡಲಿ. ಆದಾದ ನಂತರ ಕೇಂದ್ರದ ಬಗ್ಗೆ ಮಾತನಾಡಲಿ. ಕೇಂದ್ರ ನಾಯಕರು, ನಿಮ್ಮ ರಾಜ್ಯ ಸರ್ಕಾರ ಪರಿಹಾರ ನೀಡಿಲ್ಲವೇ? ಎಂದು ಕೇಳಬೇಕಾದರೆ ನಾನು ತಲೆತಗ್ಗಿಸುವಂತಾಯಿತು" ಎಂದರು.
"ಕೆಂಪಣ್ಣ, ಮುನಿರತ್ನ ಮೇಲೆ ಆರೋಪ ಮಾಡಿದ ವೇಳೆ ಮುನಿರತ್ನ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿ ಕೆಂಪಣ್ಣ ಬಹಿರಂಗವಾಗಿ ಅಧಿಕಾರಿ ಮತ್ತು ಡಿಸಿಎಂ ಶಿವಕುಮಾರ್ ಹೆಸರಿನ್ನು ಹೇಳಿದ್ದಾರೆ. ಕೆಂಪಣ್ಣ ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿದ್ದರು. ಆದರೆ, ಹೆಸರು ಬಹಿರಂಗಪಡಿಸಿರಲಿಲ್ಲ. ಇಲ್ಲಿ ಹೆಸರು ಬಹಿರಂಗ ಮಾಡಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿದೆ. ಈ ಬಗ್ಗೆ ತನಿಖೆಯಾಗಲಿ" ಎಂದು ಒತ್ತಾಯಿಸಿದರು.
ಬಿಜೆಪಿ ಪ್ರತಿಪಕ್ಷ ನಾಯಕ ಆಯ್ಕೆ: "ಕಾಂಗ್ರೆಸ್ ಎಐಸಿಸಿಗೆ ನಾಲ್ಕು ವರ್ಷ ಅಧ್ಯಕ್ಷರು ಇರಲಿಲ್ಲ. ನಮ್ಮ ಕೇಂದ್ರ ನಾಯಕರು ಈ ಕರ್ನಾಟಕದ ಕಡೆ ಗಮನ ಹರಿಸಿ ಆದಷ್ಟು ಬೇಗ ಪ್ರತಿಪಕ್ಷ ನಾಯಕನ ಆಯ್ಕೆ ಮಾಡುತ್ತಾರೆ" ಎಂದು ತಿಳಿಸಿದರು.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ತರುವ ಪ್ರಯತ್ನ ಮಾಡಿ : ಕಟೀಲ್ಗೆ ಸಚಿವ ಆರ್ ಬಿ ತಿಮ್ಮಾಪೂರ ಟಾಂಗ್