ಹಾವೇರಿ: ಕೆಲವು ಕಾರಣಗಳನ್ನು ಮುಂದಿಟ್ಟು ಕಳೆದ ಉಪಚುನಾವಣೆಯಲ್ಲಿ ನನಗೆ ನಮ್ಮ ಹೈಕಮಾಂಡ್ ಟಿಕೆಟ್ ನೀಡಿರಲಿಲ್ಲ. ಆದರೆ, ಟಿಕೆಟ್ ಸಿಗದಿದ್ದಕ್ಕೆ ಕೆಲವು ಜನರು ನಾನು ಸೂಟ್‌ಕೇಸ್ ಪಡೆದುಕೊಂಡಿದ್ದೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮನೋಹರ್ ತಹಶೀಲ್ದಾರ್ ಹೇಳಿದರು. ಹಾನಗಲ್ ತಾಲೂಕಿನ ಶಿವಪುರ ಗ್ರಾಮದಲ್ಲಿ ಬುಧವಾರ ನಡೆದ ಕಾಂಗ್ರೆಸ್ ರೈತ ಸ್ಪಂದನ ಸಭೆಯಲ್ಲಿ ಅವರು ಮಾತನಾಡಿದರು.
"ಅನೇಕರು ಪ್ರತಿಭಟನೆ ಮಾಡಿಯಾದರೂ ನೀವು ಚುನಾವಣೆಗೆ ಟಿಕೆಟ್ ಕೇಳಬೇಕಿತ್ತು ಅಂದರು. ಕೆಲವರು ಏಕೆ ಕೇಳಲಿಲ್ಲವೆಂದು ಪ್ರಶ್ನಿಸಿದರು. ಇನ್ನೂ ಕೆಲವು ಮಂದಿ ಸೂಟ್‌ಕೇಸ್ ತೆಗೆದುಕೊಂಡಿದ್ದೇನೆ, ಹಾಗಾಗಿ ಉಪಚುನಾವಣೆಗೆ ಟಿಕೆಟ್ ಕೇಳಲಿಲ್ಲ ಅಂತ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಹೈಕಮಾಂಡ್ ನಿರ್ದೇಶನದಂತೆ ನಾನು ನಡೆದುಕೊಂಡಿದ್ದು ನನಗೆ ಟಿಕೆಟ್ ಸಿಗಲಿಲ್ಲ. ನಾನು ಯಾರ ಹತ್ತಿರವೂ ಸೂಟ್‌ಕೇಸ್ ಪಡೆದಿಲ್ಲ. ನಾನು ಅಪ್ಪನಿಗೆ ಹುಟ್ಟಿದವನು. ಯಾವತ್ತೂ ಭ್ರಷ್ಟರ ದುಡ್ಡಿಗೆ ಕೈಚಾಚುವನಲ್ಲ. ನನ್ನನ್ನು ಕೊಳ್ಳುವಂತಹ ಶಕ್ತಿ ಯಾರಿಗೂ ಇಲ್ಲ" ಎಂದು ಆಕ್ರೋಶ ಹೊರಹಾಕಿದರು.
ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾನು ವರಿಷ್ಠರ ಮಾತಿಗೆ ಗೌರವ ನೀಡಿ ಹಿಂದೆ ಸರಿದಿದ್ದೇನೆ. ನನಗೆ ವರಿಷ್ಠರು ಹಾನಗಲ್ ಕ್ಷೇತ್ರಕ್ಕೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ. ಒಂದು ವೇಳೆ ನೀಡದಿದ್ದರೆ ಬೆಂಬಲಿಗರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ಹಾನಗಲ್ ಕ್ಷೇತ್ರದಲ್ಲಿ ಹೊರಗಿನವರಿಗೆ ಟಿಕೆಟ್ ನೀಡಬಾರದು. ಕ್ಷೇತ್ರದ ಯಾರಿಗಾದರೂ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸುವುದಾಗಿ ಮನೋಹರ ತಹಶೀಲ್ದಾರ್ ತಿಳಿಸಿದರು.
2013ರ ಚುನಾವಣೆಯಲ್ಲಿ ತಹಶೀಲ್ದಾರ್ ಗೆಲುವು ಸಾಧಿಸಿದ್ದರು. ಹೈಕಮಾಂಡ್ ಸಚಿವ ಸ್ಥಾನ ನೀಡಿತ್ತಾದರೂ ಸಚಿವರಾಗಿ ಮುಂದುವರೆಯಲಿಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಎಂ.ಉದಾಸಿ ಮುಂದೆ ಇವರು ಸೋಲು ಅನುಭವಿಸಿದ್ದರು. ಶಾಸಕರಾಗಿದ್ದಾಗಲೇ ಉದಾಸಿ ವಿಧಿವಶರಾಗಿದ್ದರು. ತೆರವಾದ ಸ್ಥಾನಕ್ಕೆ 2021ರಲ್ಲಿ ಉಪಚುನಾವಣೆ ನಡೆದಿತ್ತು. ತೀವ್ರ ಪೈಪೋಟಿಯ ನಂತರ ಕಾಂಗ್ರೆಸ್ ಪಕ್ಷ ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆಯನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿತ್ತು. ಸ್ಥಳೀಯರಿಂದ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮನೋಹರ ತಹಶೀಲ್ದಾರ್ ಅವರನ್ನು ಎಂಎಲ್ಸಿ ಮಾಡುವ ಭರವಸೆ ನೀಡಿತ್ತು ಎನ್ನಲಾಗಿದೆ.
ಆದರೆ ಮನೋಹರ ತಹಶೀಲ್ದಾರ್ ಜೆಡಿಎಸ್‌ನಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇವೆಲ್ಲದರ ನಡುವೆ ಶ್ರೀನಿವಾಸ ಮಾನೆ ಬಿಜೆಪಿ ಅಭ್ಯರ್ಥಿ ವಿರುದ್ಧ ಜಯಗಳಿಸುವ ಮೂಲಕ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಖಾತೆ ತೆರೆದರು. ಇದೇ 2023ರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೈತಪ್ಪಿದ ಕ್ಷೇತ್ರವನ್ನು ಮನೋಹರ ತಹಶೀಲ್ದಾರ್ ಮರಳಿ ಪಡೆಯುವ ಹೋರಾಟದಲ್ಲಿದ್ದಾರೆ. ತಮಗೆ ಅಥವಾ ಕ್ಷೇತ್ರದ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ವಿಐಎಸ್‌ಎಲ್ ಕಾರ್ಖಾನೆ ಮತ್ತೆ ಆರಂಭವಾಗಿ ಲಾಭದಲ್ಲಿ ನಡೆಯಬೇಕು: ಸಿಎಂ ಬೊಮ್ಮಾಯಿ