ರಾಣೆಬೆನ್ನೂರು: ಅಳಿವಿನಂಚಿನಲ್ಲಿರುವ ಮಣ್ಣಮುಕ್ಕು ಹಾವುಗಳನ್ನು ಮನೆಯಲ್ಲಿ ಸಾಕಿ ಲಕ್ಷಾಂತರ ರೂ.ಗಳಿಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ರಾಣೆಬೇನ್ನೂರು ವಲಯ ಅರಣ್ಯಾಧಿಕಾರಿಗಳು ಬಂಧಿಸಿ ಐದು ಹಾವುಗಳನ್ನು ರಕ್ಷಣೆ ಮಾಡಿದ್ದಾರೆ.
ದೇವರಗುಡ್ಡ ಗ್ರಾಮದ ಬೀರಪ್ಪ ನಾಗಪ್ಪ ಮೇಡ್ಲೆರಿ ಬಂಧಿತ ಆರೋಪಿಯಾಗಿದ್ದು, ಈತನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ. ಮೂಲತಃ ಬ್ಯಾಡಗಿ ತಾಲೂಕಿನ ಬುಡಪನಹಳ್ಳಿ ಗ್ರಾಮದ ನಿವಾಸಿಯಾದ ಈತ, ಕಳೆದ ಆರು ವರ್ಷಗಳಿಂದ ದೇವರಗುಡ್ಡ ಗ್ರಾಮದಲ್ಲಿ ವಾಸವಾಗಿದ್ದಾನೆ.
ಈ ವೇಳೆ ಮರಿ ಮಣ್ಣಮುಕ್ಕ ಹಾವುಗಳನ್ನು ಹಿಡಿದು ಮನೆಯಲ್ಲಿ ಸಾಕುತ್ತಿದ್ದನು. ಕಳೆದ ಕೆಲ ದಿನಗಳ ಹಿಂದೆ ಸುಮಾರು ಒಂದು ಲಕ್ಷ ರೂ.ಗೆ ಒಂದು ಹಾವು ಮಾರಾಟ ಮಾಡಿದ್ದು, ಮನೆಯಲ್ಲಿ ಇನ್ನೂ ಐದು ಹಾವುಗಳನ್ನು ಸಾಕಿದ್ದನ್ನು ಎಂದು ತಿಳಿದು ಬಂದಿದೆ. ಈ ಕುರಿತಂತೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬೀರಪ್ಪ ಮನೆ ಮೇಲೆ ದಾಳಿ ನಡೆಸಿದ್ದರು.