ಹಾವೇರಿ: ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವ ವೇಳೆ ಏಲಕ್ಕಿ ನಗರಕ್ಕೆ ಹೊಸ ಕಳೆ ಬರಲಾರಂಭಿಸುತ್ತದೆ. ಈ ಹೊಸ ಕಳೆಗೆ ಕಾರಣ ನಗರದ ಪ್ರಮುಖ ರಸ್ತೆಗಳಲ್ಲಿ ಕಾಣಸಿಗುವ ಗುಲ್ ಮೋಹರ್ ಮತ್ತು ಗೋಲ್ಡನ್ ಚೈನ್ ಪುಷ್ಪಗಳು.
ನಗರದ ರಸ್ತೆಗಳ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಈ ಮರಗಳಲ್ಲಿ ಇದೀಗ ಕೆಂಪು ಮತ್ತು ಹಳದಿ ಪುಷ್ಪಗಳ ಅರಳುವಿಕೆ ಆರಂಭವಾಗಿದೆ. ಮರದ ತುಂಬೆಲ್ಲಾ ಅರಳಿರುವ ಈ ಪುಷ್ಪಗಳನ್ನು ಎಷ್ಟು ನೋಡಿದರೂ ಸಾಲದು. ಇವುಗಳ ಸೌಂದರ್ಯಕ್ಕೆ ಮನ ಸೋಲದವರೇ ಇಲ್ಲ. ಎಷ್ಟೇ ಅವಸರವಿರಲಿ, ಜಂಜಾಟವಿರಲಿ ಕೆಲ ಕ್ಷಣ ಈ ಮರಗಳ ಬಳಿ ನಿಂತು ಪುಷ್ಪಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ.
ಸ್ಥಳೀಯವಾಗಿ ಮೇ ಪ್ಲವರ್ ಮತ್ತು ಗೋಲ್ಡನ್ ಚೈನ್ ಟ್ರೀಗಳೆಂದು ಕರೆಸಿಕೊಳ್ಳುವ ಈ ಮರಗಳಲ್ಲೀಗ ಪುಷ್ಟಗಳು ಬಿಡಲಾರಂಭಿಸಿವೆ. ಗಾಳಿಗೆ ಬಳುಕುವ ಪುಷ್ಪಗಳು, ಅವುಗಳ ಸುತ್ತ ದುಂಬಿಗಳು, ಇತ್ತ ಕೋಗಿಲೆಯ ನಿನಾದ, ಕಣ್ಣಿಗೆ ಸೊಬಗು ನೀಡುವ ಜತೆಗೆ ಕಿವಿಗಳನ್ನು ಇಂಪಾಗಿಸುತ್ತದೆ. ಎಂತಹ ಒತ್ತಡಗಳಿದ್ದರೂ ಕೆಲಕಾಲ ಈ ಮರಗಳತ್ತ ಮುಖಮಾಡಿದರೆ ಸಾಕು ಕೊಂಚ ನಿರಾಳ ಎನಿಸುತ್ತದೆ ಎನ್ನುತ್ತಾರೆ ದಾರಿಹೋಕರರು.
ಇದನ್ನೂ ಓದಿ: ಚಿಕ್ಕಮಗಳೂರು ಸಂಪೂರ್ಣ ಲಾಕ್: ಅಗತ್ಯ ವಸ್ತುಗಳ ಖರೀದಿಗೆ ಮುಗ್ಗಿಬಿದ್ದ ಜನರು!