ಹಾವೇರಿ: ಸಾಲು ಸಾಲು ಗಿಡಗಳ ನಡುವೆ ಅರಳಿ ನಿಂತಿರುವ ಹೂವಿನ ಗೊಂಚಲು. ಹಾವೇರಿ - ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುತ್ತು ಪೋಣಿಸಿದಂತೆ ತೂಗಾಡುತ್ತಾ ದಾರಿ ಹೋಕರ ಕಣ್ಮನ ಸೆಳೆಯುತ್ತಿವೆ.
ಹಾವೇರಿ ಮತ್ತು ಹುಬ್ಬಳ್ಳಿಯನ್ನ ರಾಷ್ಟ್ರೀಯ ಹೆದ್ದಾರಿ 4 ಸೇರಿಸುತ್ತದೆ. ಚತುಷ್ಪಥವಿದ್ದ ಈ ರಸ್ತೆ ಈಗ ಷಟ್ಪಥವಾಗಿ ಮಾರ್ಪಟ್ಟಿದೆ. ನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತವೆ. ವಾಹನ ಸವಾರರ ಅನುಕೂಲಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ರಸ್ತೆ ವಿಭಜಕದಲ್ಲಿ ಪುಷ್ಪ ಗಿಡಗಳನ್ನು ನೆಟ್ಟಿದ್ದರು. ಈ ಗಿಡಗಳು ಇದೀಗ ಹೂ ಬಿಡಲಾರಂಭಿಸಿದ್ದು, ಸವಾರರ ಕಣ್ಮನ ಸೆಳೆಯುತ್ತಿವೆ. ಜೊತೆಗೆ ರಾತ್ರಿ ವೇಳೆ ವಾಹನ ಸವಾರರಿಗೆ ಎದುರಿಗೆ ಬರುತ್ತಿರುವ ವಾಹನದ ಬೆಳಕಿನ ಸಮಸ್ಯೆ ತಡೆಯುತ್ತಿವೆ.
ಕಣಗಲ, ದಾಸವಾಳ, ಹೊನ್ನರಿಕೆ ಸೇರಿದಂತೆ ವಿವಿಧ ಗಿಡಗಳು ಹೂ ಬಿಟ್ಟಿದ್ದು, ಎಲ್ಲರ ಗಮನ ಸೆಳೆಯುತ್ತಿವೆ. ಪ್ರತಿವರ್ಷ ಪ್ರಾಧಿಕಾರ ವಿವಿಧ ಬಗೆಯ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದೆ. ಹಗಲು ಹೊತ್ತಿನಲ್ಲಿ ಸವಾರರಿಗೆ ಮನೋಲ್ಲಾಸ ನೀಡುವ ಈ ಗಿಡಗಳು, ರಾತ್ರಿ ವೇಳೆ, ವೈಜ್ಞಾನಿಕ ಚಾಲನೆಗೆ ಅನುಕೂಲಕರವಾಗಿವೆ. ಜೊತೆಗೆ ತಾಸುಗಟ್ಟಲೆ ವಾಹನ ಚಾಲನೆ ಮಾಡಿ ಜಡ್ಡುಗಟ್ಟಿರುವ ಮನಸುಗಳಿಗೆ ಈ ಪುಷ್ಪಗಳು ಮುದ ನೀಡುತ್ತಿವೆ.
ಇನ್ನು ಪ್ರಾಧಿಕಾರದ ಈ ಕೆಲಸಕ್ಕೆ ವಾಹನ ಸವಾರರು, ದಾರಿಹೋಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಹೆದ್ದಾರಿ ಇಕ್ಕೆಲಗಳಲ್ಲಿ ಸಹ ಗಿಡ ನೆಡುವಂತೆ ಒತ್ತಾಯಿಸಿದ್ದಾರೆ.