ಹಾವೇರಿ: ಜಿಲ್ಲೆಯಲ್ಲಿ ಇದೀಗ ಕಳ್ಳರು ರೈತರ ಬೆನ್ನು ಬಿದ್ದಿದ್ದಾರೆ. ಇಷ್ಟು ದಿನ ಮನೆ ಕಳ್ಳತನ, ಸರಗಳ್ಳತನ ಸೇರಿದಂತೆ ವಿವಿಧ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದವು. ಕೆಲವು ಕಡೆಗಳಲ್ಲಿ ಅಲೆಮಾರಿ ಕುರುಬರು ಸಾಕಿದ್ದ ಕುರಿಗಳೂ ಸಹ ಕಳ್ಳತನವಾಗುತ್ತಿದ್ದವು. ಇದೀಗ ರೈತರು ರಾಶಿ ಮಾಡಿರುವ ಮೆಕ್ಕೆಜೋಳದ ತೆನೆಗಳ ಮೇಲೆ ಕಣ್ಣು ಹಾಕಿದ್ದಾರೆ.
ಜಿಲ್ಲೆಯ ರಾಣೆಬೆನ್ನೂರಿನ ಹಲಗೇರಿ ಮತ್ತು ರಟ್ಟಿಹಳ್ಳಿ ತಾಲೂಕಿನ ವಿವಿಧೆಡೆ ಕಳ್ಳರು ಈ ರೀತಿಯ ಕೃತ್ಯಗಳಿಗೆ ಮುಂದಾಗಿದ್ದಾರೆ. ರೈತರು ರಸ್ತೆಗಳ ಮೇಲೆ ಹಾಕಿರುವ ತೆನೆರಾಶಿ, ಮೆಕ್ಕೆಜೋಳ ತುಂಬಿಟ್ಟ ಚೀಲಗಳನ್ನು ಕದಿಯುತ್ತಿದ್ದಾರೆ. ಈ ರೀತಿಯ ಹಲವು ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿವೆ. ರಟ್ಟಿಹಳ್ಳಿ ತಾಲೂಕಿನಲ್ಲಿ ಮೂರು ಮತ್ತು ಹಲಗೇರಿ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ವಿಶೇಷ ತಂಡ ರಚಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯಲ್ಲಿ ಮೆಕ್ಕೆಜೋಳ ಕಳ್ಳತನದ ಪ್ರಕರಣಗಳ ಪತ್ತೆಗೆ ಎಸ್ಪಿ ಹನುಮಂತರಾಯ, ಹಿರೇಕೆರೂರು ಸಿಪಿಐ ಆರ್.ಆರ್. ಪಾಟೀಲ್ ನೇತೃತ್ವದಲ್ಲಿ ತಂಡ ರಚಿಸಿದ್ದರು. ಈ ತಂಡ ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿದೆ. ಬಂಧಿತರನ್ನು ರಾಣೆಬೆನ್ನೂರು ತಾಲೂಕಿನ ರಾಹುತನಕಟ್ಟೆ ಗ್ರಾಮದ ಕಲ್ಲಪ್ಪ, ಹನುಮಂತಪ್ಪ, ನಾಗಪ್ಪ, ಹೊನ್ನಪ್ಪ ಮತ್ತು ದಂಡೆಪ್ಪ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 96 ಕ್ವಿಂಟಲ್ ಮೆಕ್ಕೆಜೋಳ ಮತ್ತು ಕಳ್ಳತನಕ್ಕೆ ಬಳಸುತ್ತಿದ್ದ ಟಾಟಾ ಯೋಧ ಹಾಗೂ ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ. ಮೊದಲೇ ಅನ್ನದಾತ ಸಂಕಷ್ಟದಲ್ಲಿ ಸಿಲುಕಿದ್ದಾನೆ, ಅದರಲ್ಲಿ ಅಲ್ಪಸ್ವಲ್ಪ ಮೆಕ್ಕೆಜೋಳ ಬೆಳೆದಿದ್ದ ರೈತರಿಗೆ ಈ ತಂಡ ಇನ್ನಿಲ್ಲದ ಸಂಕಷ್ಟ ಉಂಟು ಮಾಡಿತ್ತು.
'ರೈತರು ಸಹ ಎಚ್ಚರಿಕೆಯಿಂದ ಇರಬೇಕು. ಮೆಕ್ಕೆಜೋಳ ಬೆಳೆದ ರೈತರು ಆದಷ್ಟು ಮನೆಗಳ ಮುಂದೆ ತೆನೆಗಳ ರಾಶಿ ಹಾಕಿಕೊಳ್ಳಬೇಕು. ಇಲ್ಲವೇ ತೋಟದ ಮನೆ, ಜಮೀನುಗಳಲ್ಲಿ ರಾಶಿ ಮಾಡಬೇಕು. ಸುತ್ತಮುತ್ತಲಿನ ನಾಲ್ಕಾರು ರೈತರು ಒಂದು ಕಡೆ ರಾಶಿ ಮಾಡಿ ಸರತಿಯಂತೆ ಕಾವಲು ಕಾಯಬೇಕು' ಎಂದು ಎಸ್ಪಿ ಹನುಮಂತರಾಯ ಸಲಹೆ ನೀಡಿದ್ದಾರೆ.