ಹಾವೇರಿ: ಹಳ್ಳಿಗಳಿಂದ ಬಂದು ನೆಲೆಸಿದ ಕೃಷಿ ಮೂಲದ ಕುಟುಂಬಗಳು ಹೆಚ್ಚಾಗಿರುವ ಹಾವೇರಿಯಲ್ಲಿ ಪಕ್ಕಾ ಗ್ರಾಮೀಣ ಸೊಗಡಿನ ಹಬ್ಬಗಳು ಜೋರಾಗಿಯೇ ನಡೆಯುತ್ತವೆ. ನಾಳೆ ಜಿಲ್ಲೆಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬ ಆಚರಿಸಲಾಗುತ್ತದೆ.
ಮಣ್ಣೆತ್ತಿನ ಅಮಾವಾಸ್ಯೆ ಹಬ್ಬ ಎಂದರೇನು?: ರೈತಾಪಿ ಕುಟುಂಬಗಳು ಮನೆಯಲ್ಲಿ ಮಣ್ಣಿನಿಂದ ಮಾಡಿದ ಎತ್ತುಗಳನ್ನು ಸ್ಥಾಪಿಸಿ ಪೂಜೆ ಸಲ್ಲಿಸುತ್ತಾರೆ. ಮಣ್ಣು ಮತ್ತು ಎತ್ತುಗಳು ರೈತನ ಜೀವನದ ಒಂದು ಭಾಗ. ಇಂತಹ ಎತ್ತುಗಳ ಮಣ್ಣಿನ ಮೂರ್ತಿಗಳನ್ನು ತಯಾರು ಮಾಡಿ, ಪೂಜೆ ಸಲ್ಲಿಸುವ ಮೂಲಕ ರೈತರು ಕೃತಜ್ಞತೆ ಸಲ್ಲಿಸುತ್ತಾರೆ.
ಮಣ್ಣೆತ್ತಿನ ಅಮಾವಾಸ್ಯೆ ದಿನ ಆಗಮಿಸುತ್ತಿದ್ದಂತೆ ಕುಂಬಾರರ ಕುಟುಂಬಗಳು ಮಣ್ಣಿನ ಬಸವಣ್ಣನ ಮೂರ್ತಿ ತಯಾರಿಕೆಯಲ್ಲಿ ನಿರತರಾಗುತ್ತವೆ. ಹಾವೇರಿಯ ಕುಂಬಾರಗುಂಡಿಯಲ್ಲಿ ಕುಂಬಾರರು ಮಣ್ಣಿನ ಬಸವಣ್ಣನ ಮೂರ್ತಿಗಳನ್ನು ತಯಾರು ಮಾಡಿ, ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಾರೆ. ಅಲ್ಲದೆ ಕೆಲವರು ತಮ್ಮ ವಾಹನಗಳಲ್ಲಿ ಬಸವಣ್ಣನ ಮೂರ್ತಿಗಳನ್ನು ಮನೆ ಮನೆಗೆ ತಂದು ಮಾರಾಟ ಮಾಡುತ್ತಾರೆ.
10 ರೂ. ಯಿಂದ ನೂರು ರೂಪಾಯಿವರೆಗಿನ ವಿವಿಧ ನಮೂನೆಯ ಬಣ್ಣ ಬಣ್ಣದ ಮಣ್ಣಿನ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಮಣ್ಣಿನಿಂದ ತಯಾರಿಸಿದ ಬಸವಣ್ಣನ ಮೂರ್ತಿಗಳಿಗೆ ಇತ್ತೀಚೆಗೆ ಬಣ್ಣ ಹಾಕುವ ಪದ್ಧತಿ ಸಹ ಬಂದಿದೆ. ಉತ್ತರ ಕರ್ನಾಟಕದಲ್ಲಿ ಈ ಆಚರಣೆ ಹೆಚ್ಚು ಪ್ರಾಮುಖ್ಯತೆ ಪಡೆದಿದ್ದು, ಈ ಹಬ್ಬದ ನಂತರ ಗಣೇಶನ ವಿಗ್ರಹ ತಯಾರಿಕೆ ಆರಂಭವಾಗುತ್ತದೆ.