ರಾಣೆಬೆನ್ನೂರು/ಹಾವೇರಿ: ತುಂಗಾ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ದೊರೆಯದ ಕಾರಣ ರೈತರು ಕಳೆದ ಒಂದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಹಿರೆಕೇರೂರು ಹಾಗೂ ರಾಣೆಬೆನ್ನೂರು ತಾಲೂಕಿನ ನೂರಾರು ರೈತರು ಭೂಮಿ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಇವರ ಹೋರಾಟದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾಧಿಕಾರಿ ಕೃಷ್ಣಾ ಭಾಜಪೇಯಿ, ಕೃಷಿ ಸಚಿವ ಬಿ.ಸಿ.ಪಾಟೀಲ ಸೇರಿದಂತೆ ಅನೇಕ ಅಧಿಕಾರಿಗಳು ಸಹ ಪ್ರತಿಭಟನೆ ಸ್ಥಳಕ್ಕೆ ಆ ಗಮಿಸಿ ರೈತರಿಗೆ ಭರವಸೆ ನೀಡಿ ಹೋಗುತ್ತಿದ್ದಾರೆ. ಆದರೆ ಈವರೆಗೂ ಕೂಡ ಪರಿಹಾರ ಮಾತ್ರ ದೊರಕಿಸಿ ಕೊಡಲು ಯಾರೂ ಮುಂದಾಗುತ್ತಿಲ್ಲ ಎಂದು ಮುಖಂಡರಾದ ಎಸ್.ಡಿ.ಹಿರೇಮಠ ಆರೋಪಿಸಿದರು.
ಸರ್ಕಾರ ನಮಗೆ ಭೂಮಿ ಪರಿಹಾರ ನೀಡುವ ತನಕ ಯುಟಿಪಿ ಕಚೇರಿ ಬಿಟ್ಟು ಹೋಗುವುದಿಲ್ಲ ಎಂದು ರೈತರು ಕಳೆದ ಎರಡು ದಿನಗಳಿಂದ ಅಲ್ಲಿಯೇ ಅಡುಗೆ ಮಾಡಿಕೊಂಡು ಧರಣಿ ನಡೆಸುತ್ತಿದ್ದಾರೆ.