ಹಾವೇರಿ: ಕೇವಲ ಮುಂಗಾರು ಅಷ್ಟೇ ಅಲ್ಲದೆ ಹಿಂಗಾರು ಮಳೆಯೂ ಕೈಕೊಟ್ಟಿದ್ದು, ಮಳೆರಾಯನ ಮುನಿಸಿನಿಂದ ಹಾವೇರಿ ಜಿಲ್ಲೆಯ ರೈತರು ಹೈರಾಣಾಗಿದ್ದಾರೆ. ಈ ಮಧ್ಯೆ ಕೆಲ ರೈತರು ಕೊಳವೆಬಾವಿ ನೀರನ್ನು ನಂಬಿ ಜೀವನೋಪಾಯಕ್ಕಾಗಿ ಬೆಳೆದ ತರಕಾರಿ ಬೆಳೆಗೆ ಸರಿಯಾದ ಬೆಲೆ ಸಿಗದೆ ಅನ್ನದಾತರು ಕಂಗಾಲಾಗಿದ್ದಾರೆ. ಹಾವೇರಿ ತಾಲೂಕಿನ ಕಬ್ಬೂರು ಗ್ರಾಮದ ರೈತ ಶಿವಪ್ಪ, ಒಂದು ಎಕರೆಯಲ್ಲಿ ಬೆಳೆದ ಬದನೇಕಾಯಿ ಉತ್ತಮ ಫಸಲು ನೀಡಿದರೂ, ಬದನೇಕಾಯಿಗೆ ಸರಿಯಾದ ಬೆಲೆ ಸಿಗದೆ ಇದೀಗ ಹತಾಶರಾಗಿದ್ದಾರೆ.
ಜಿಲ್ಲೆಯ ಅನ್ನದಾತ ಅಕ್ಷರಶಃ ಕಂಗಾಲಾಗಿದ್ದಾನೆ. ಮುಂಗಾರು ಪೂರ್ವ ಮಳೆ, ಮುಂಗಾರು ಮಳೆಗಳಲ್ಲಿ ಎರಡೆರಡು ಬಾರಿ ಬಿತ್ತನೆ ಮಾಡಿದರು ಯಾವುದೇ ಬೆಳೆ ಬರಲಿಲ್ಲ. ಶಿವಪ್ಪ ಅವರು ಉತ್ತಮ ಬೀಜ ತಂದು ಒಂದು ಎಕರೆ ಜಮೀನಿನಲ್ಲಿ ಬದನೆಕಾಯಿ ಬೆಳೆದಿದ್ದರು. ಬದನೇಕಾಯಿ ಬೆಳೆದ ನಾಲ್ಕು ತಿಂಗಳಲ್ಲಿ ಉತ್ತಮವಾಗಿ ಬೆಳೆ ಬಂದಿತ್ತು. ಫಸಲು ಸಹ ನಿರೀಕ್ಷೆಗಿಂತ ಅಧಿಕ ಬಂದಿದೆ. ಆದರೆ ಬದನೇಕಾಯಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುತ್ತಿಲ್ಲ. ಶಿವಪ್ಪ ಒಂದು ಎಕರೆಯಲ್ಲಿ ಸುಮಾರು 50 ಸಾವಿರ ರೂಪಾಯಿ ಖರ್ಚು ಮಾಡಿದ್ದು, ಬೆಳೆ ಫಸಲು ಬಿಟ್ಟರೂ ಬದನೇಕಾಯಿಗೆ ಬೆಲೆ ಇಲ್ಲದ ಕಾರಣ ಹತಾಶರಾಗಿದ್ದಾರೆ.
"ದಿನನಿತ್ಯ ಕೂಲಿ ಕಾರ್ಮಿಕರಿಂದ ಬದನೇಕಾಯಿಗೆ ಕಟಾವ್ ಮಾಡಿಸಿ ಬಾಕ್ಸ್ನಲ್ಲಿ ಮಾರುಕಟ್ಟೆಗೆ ತಂದರೆ, ಬದನೇಕಾಯಿಗೆ ಕೇಳುವವರೇ ಇಲ್ಲದಂತಾಗಿದೆ. ಹರಾಜಿನಲ್ಲಿ ಬಾಕ್ಸ್ಗೆ 20 ರೂಪಾಯಿ, 30 ರೂಪಾಯಿ ಕೇಳುತ್ತಿದ್ದಾರೆ. ಈ ರೀತಿ ಮಾಡಿದರೆ ಕಾರ್ಮಿಕರ ಕೂಲಿ, ವಾಹನ ಖರ್ಚು ಸಹ ಮೈಮೇಲೆ ಬರುತ್ತೆ" ಎನ್ನುತ್ತಾರೆ ಶಿವಪ್ಪ.
ದಿನನಿತ್ಯ ಇದೇ ರೀತಿ ಇರುವುದನ್ನು ನೋಡಿ, ಇದೀಗ ಬದನೇಕಾಯಿಗೆ ಜಮೀನು ಹಾಳು ಮಾಡಲು ಶಿವಪ್ಪ ಮುಂದಾಗಿದ್ದಾರೆ. ಎಕರೆ ಜಮೀನಿನಲ್ಲಿ ಸೋಂಪಾಗಿ ಬೆಳೆದು ಉತ್ತಮವಾಗಿ ಬೆಳೆದ ಬದನೇಕಾಯಿ ಸಮೇತ ಗಿಡಗಳನ್ನು ರೈತ ಶಿವಪ್ಪ ಹಾಳು ಮಾಡಿದ್ದಾರೆ. ಟ್ರ್ಯಾಕ್ಟರ್ ರೋಟರ್ನಲ್ಲಿ, ಅದಕ್ಕೂ ಸಹ ಕೂಲಿ ನೀಡಿ ಬದನೇಕಾಯಿ ಬೆಳೆಯನ್ನು ಶಿವಪ್ಪ ಹರಗಿದ್ದಾರೆ.
"ಮುಂಗಾರು ಕೈಕೊಟ್ಟಿತು ಹಿಂಗಾರು ಮಳೆ ಸಹ ಕೈಕೊಟ್ಟಿತು. ರೈತರಿಗೆ ಸಮರ್ಪಕ ವಿದ್ಯುತ್ ಸಹ ಇರಲಿಲ್ಲ. ಇಂತಹ ಕಷ್ಟಕಾಲದಲ್ಲಿ ಹಗಲು ರಾತ್ರಿ ಬೆಳೆಗೆ ನೀರು ಹಾಯಿಸಿ ಬೆಳೆಸಿದ ಬದನೆ ಹಾಳು ಮಾಡಲು ಮನಸ್ಸು ಬರುತ್ತಿಲ್ಲ. ಆದರೆ ಅನಿವಾರ್ಯ, ಕೊನೇ ಪಕ್ಷ ಇದರಿಂದ ಭೂಮಿತಾಯಿಗೆ ಗೊಬ್ಬರವಾದರೂ ಆದರೆ ಸಾಕು. 50 ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದು, ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದೆವು. ಆದಾಯ ಇರಲಿ, ಕೊನೇ ಪಕ್ಷ ಅದಕ್ಕೆ ಮಾಡಿದ ಖರ್ಚು ಸಹ ಬರಲಿಲ್ಲ." ಎನ್ನುತ್ತಿದ್ದಾರೆ ಶಿವಪ್ಪ.
ಇದು ಕೇವಲ ಶಿವಪ್ಪ ಅವರ ಒಬ್ಬರ ಸಮಸ್ಯೆಯಲ್ಲ, ಸುತ್ತಮುತ್ತ ಬದನೇಕಾಯಿ ಬೆಳೆದ ಬಹುತೇಕ ರೈತರದ್ದು ಇದೇ ಕಥೆ. "ಒಂದು ಕಡೆ ಪ್ರಕೃತಿ ಮುನಿಸಿಕೊಂಡಿದೆ. ಮಳೆ ನಂಬಿ ಬೆಳೆದ ಬೆಳೆಗಳು ಬರಲಿಲ್ಲ. ಇನ್ನೊಂದು ಕಡೆ ಮಳೆ ಕೈಕೊಟ್ಟರೂ, ಜೀವನಾಂಶಕ್ಕೆ ಇರಲಿ ಎಂದು ಬೆಳೆದ ಬದನೇಕಾಯಿ ಉತ್ತಮ ಇಳುವರಿ ಬಂದಿದೆ. ಆದರೆ ಅದನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಹೋದರೆ ಕೇಳುವವರಿಲ್ಲ. ಕೆಜಿಗೆ ಕನಿಷ್ಠ ಪಕ್ಷ ಒಂದು ರೂಪಾಯಿ ಸಹ ಸಿಗುತ್ತಿಲ್ಲ. ಜಮೀನಿನಿಂದ ಸಾರಿಗೆ ವೆಚ್ಚ ಸೇರಿ ವರ್ತಕರು ಕಮಿಷನ್ ಹಮಾಲರ ಕೂಲಿಗೆ ಕೈಯಿಂದ ಹಣ ಕೊಟ್ಟು ಬರುವ ಸ್ಥಿತಿ ಇದೆ. ಈ ರೀತಿಯಾದರೆ ಹೇಗೆ ಬದುಕಬೇಕು" ಎನ್ನುವುದು ಶಿವಪ್ಪನ ಕಳವಳ.
"ಸಾಲ ಸೋಲ ಮಾಡಿ ಬಡ್ಡಿಗೆ ಹಣ ತಂದು ರೈತರು ಬಿತ್ತನೆ ಮಾಡಿ ಬೆಳೆದ ಫಸಲಿಗೆ ದರ ಸಿಗದಿದ್ದರೇ ಏನು ಮಾಡಬೇಕು. ಈ ರೀತಿಯಾದಾಗ ಸರ್ಕಾರದಿಂದ ಯಾವುದಾದರೂ ಯೋಜನೆಯಲ್ಲಿ ರೈತರಿಗೆ ಹಣ ಬರುವಂತಾಗಬೇಕು. ಕೊನೇ ಪಕ್ಷ ಬೆಳೆದ ಬೆಳೆಗೆ ಖರ್ಚು ಮಾಡಿದ ಹಣವಾದರು ಸಿಗುವಂತಾದರೆ ರೈತನ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತೆ. ಈ ನಿಟ್ಟಿನಲ್ಲಿ ಸರ್ಕಾರ, ಅಧಿಕಾರಿಗಳು ಗಮನ ನೀಡಲಿ" ಎನ್ನುತ್ತಾರೆ ಉಳಿದ ರೈತರು.
ಇದನ್ನೂ ಓದಿ: ಮಂಡ್ಯ: ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋದ ರೈತರು