ಹಾವೇರಿ : ಜಿಲ್ಲೆಯ ಸವಣೂರು ತಾಲೂಕಿನ ಮೆಳ್ಳಾಗಟ್ಟಿ ಗ್ರಾಮದ ಸಾಮಾನ್ಯ ರೈತ ನಿಂಗನಗೌಡ ಎಂಬುವರು ತಮ್ಮ ಐದು ಎಕರೆ ಜಮೀನಿನಲ್ಲಿ ಸಾಂಪ್ರದಾಯಿಕ ಬೆಳೆಗಳಾದ ಹತ್ತಿ, ಶೇಂಗಾ, ಗೋವಿನಜೋಳ ಬೆಳೆಯುತ್ತಿದ್ದರು. ಈ ವೇಳೆ ಖರ್ಚು ಅಧಿಕವಾಗಿ, ಬೆಳೆಗಳಿಂದ ಬರುವ ಆದಾಯ ಕಡಿಮೆಯಾಗಿರುತ್ತಿತ್ತು. ಇದರಿಂದ ಬೇಸತ್ತ ರೈತ, ಸಮಗ್ರ ಕೃಷಿಯತ್ತ ಮುಖ ಮಾಡಿ ಯಶಸ್ಸು ಕಾಣುತ್ತಿದ್ದಾರೆ.
ಆರಂಭದಲ್ಲಿ ಒಂದು ಎಕರೆ ಜಮೀನಿನಲ್ಲಿ ಸಮಗ್ರ ಬೇಸಾಯ ಮಾಡಿದ್ದಾರೆ. ಪೇರಲ, ಅಡಕೆ, ಚಿಕ್ಕು, ಮಾವು, ನಿಂಬೆ, ಸೀತಾಪೇರಲ, ಮೋಸಂಬಿ ಮತ್ತು ತೆಂಗಿನ ಗಿಡ ಹಚ್ಚಿದ್ದಾರೆ. ಆಂಧ್ರಪ್ರದೇಶದಿಂದ ಸುಮಾರು ಐದುನೂರು ಪೇರಲ ಸಸಿಗಳನ್ನು ತಂದು ನೆಟ್ಟಿದ್ದಾರೆ. ಎಂಟು ಅಡಿ ಅಗಲ ಮತ್ತು ಉದ್ದದ ಅಂತರದಲ್ಲಿ ಪೇರಲ ಸಸಿಗಳನ್ನು ಒಂದು ವರ್ಷದ ಹಿಂದೆ ಹಾಕಿದ್ದಾರೆ. ಈ ರೀತಿ ನೆಟ್ಟ ತೈವಾನ್ ಪಿಂಕ್ ಮತ್ತು ಲಖನೌ 459 ತಳಿಯ ಗಿಡಗಳು ಇದೀಗ ಹಣ್ಣು ಬಿಡಲಾರಂಭಿಸಿವೆ.
ಇನ್ನು ಪೇರಲ ಗಿಡಗಳ ಮಧ್ಯೆ ಚೆಂಡು ಹೂ ಕೂಡ ಬೆಳೆದಿದ್ದಾರೆ. ಇದು ಪೇರಲ ಗಿಡದ ಹೂಗಳ ಪರಾಗಸ್ಪರ್ಶಕ್ಕೆ ಮತ್ತು ಗಿಡಗಳಿಗೆ ಗೊಬ್ಬರವಾಗುತ್ತದೆ. ಚೆಂಡು ಹೂವಿನಿಂದಲೇ ಈ ವರ್ಷ ನಿಂಗನಗೌಡ ಅವರು 25 ಸಾವಿರ ರೂಪಾಯಿ ಆದಾಯ ಗಳಿಸಿದ್ದಾರೆ. ಇವುಗಳ ಮಧ್ಯೆ ಕಡಲೆ, ಉದ್ದು, ಸಾಸಿವೆ, ಕೊತ್ತಂಬರಿ ಮನೆಗೆ ಬೇಕಾಗುವಷ್ಟು ತರಕಾರಿ ಸಹ ಬೆಳೆದಿದ್ದಾರೆ.
ಒಂದು ವರ್ಷದ ಹಿಂದೆ ನೆಟ್ಟ ಪೇರಲ ಇದೀಗ ಹಣ್ಣು ಬಿಡಲಾರಂಭಿಸಿದೆ. ನಿತ್ಯ ಸುಮಾರು 20 ರಿಂದ ಮೂವತ್ತು ಕೆಜಿ ಹಣ್ಣು ಬರುತ್ತಿದೆ. ಈ ಹಣ್ಣುಗಳಿಗೆ ಸಕತ್ ಬೇಡಿಕೆ ಇದ್ದು, ರಸ್ತೆ ಪಕ್ಕದಲ್ಲಿಯೇ ಜಮೀನು ಇರುವ ಕಾರಣ ಪೇರಲ ಖರೀದಿಸಲು ಜನ ಜಮೀನಿಗೆ ಬರುತ್ತಿದ್ದಾರೆ. ಪರಿಣಾಮ ಸದ್ಯಕ್ಕೆ ನಿತ್ಯ 1 ಸಾವಿರದಿಂದ ಒಂದೂವರೆ ಸಾವಿರ ರೂ. ಗಳಿಸುತ್ತಿದ್ದಾರೆ.
ಒಂದು ಬಾರಿ ಖರ್ಚು ಮಾಡಿ ತೈವಾನ್ ಪಿಂಕ್ ಸಸಿ ನೆಟ್ಟರೆ 8 ವರ್ಷಗಳ ಕಾಲ ಹಣ್ಣುಗಳು ಬರುತ್ತವೆ. ಗಿಡಗಳನ್ನು ಸರಿಯಾಗಿ ನೋಡಿಕೊಂಡರೆ 8 ಕ್ಕಿಂತಲೂ ಅಧಿಕ ವರ್ಷ ಹಣ್ಣುಗಳು ಬಿಟ್ಟ ಉದಾಹರಣೆಗಳಿವೆ. ಈ ತೈವಾನ್ ಪಿಂಕ್ ತಳಿಯ ಪೇರಲ ಗಿಡಗಳು ವರ್ಷದ 365 ದಿನಗಳ ಕಾಲ ಹಣ್ಣು ಬಿಡುತ್ತವೆ. ಸದ್ಯಕ್ಕೆ ಪ್ರತಿದಿನ ಸಾವಿರ ರೂಪಾಯಿ ಆದಾಯ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಆದಾಯ ಮೂರು ಪಟ್ಟು ಹೆಚ್ಚಾಗಲಿದೆ. ಒಂದು ಎಕರೆ ಜಮೀನಿನಲ್ಲಿ ಪೇರಲ ಸಸಿ ನೆಡಲು ಸುಮಾರು 1 ಲಕ್ಷ ರೂಪಾಯಿ ಖರ್ಚಾಗಿದ್ದು, ಪೇರಲ ಮಾರಾಟದಿಂದ ಈಗಾಗಲೇ 35 ಸಾವಿರ ರೂಪಾಯಿ ಆದಾಯ ಬಂದಿದೆ ಎನ್ನುತ್ತಾರೆ ರೈತ ನಿಂಗನಗೌಡ.
ಇದನ್ನೂ ಓದಿ : ವಿಜಯಪುರ: ಪೇರಲ ಹಣ್ಣು ಬೆಳೆದು ಬದುಕು ರೂಪಿಸಿಕೊಂಡ ರೈತ ದಂಪತಿ
ಇನ್ನು ತೈವಾನ್ ಪಿಂಕ್ ಪೇರಲ ಹಣ್ಣು ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಅಧಿಕ ರಕ್ತದೊತ್ತಡ, ಮಧುಮೇಹ ರೋಗಿಗಳಿಗೆ ಇದು ಹೇಳಿ ಮಾಡಿಸಿದ ತಳಿ. ಗ್ಯಾಸ್ಟ್ರಿಕ್ ಸಮಸ್ಯೆಗೆ ಪಚನ ಕ್ರಿಯೆಗೆ ಪೇರಲ ತುಂಬಾ ಒಳ್ಳೆಯದು. ತಿನ್ನಲು ರುಚಿಕರವಾಗಿದ್ದು, ಒಂದು ಬಾರಿ ತಿಂದವರು ಇಲ್ಲಿಗೆ ಖಾಯಂ ಆಗಿ ಬಂದು ಹಣ್ಣು ಖರೀದಿ ಮಾಡುತ್ತಾರೆ. ಸಾವಯುವ ಗೊಬ್ಬರ ಬಳಸಿದ್ದರಿಂದ ಹಣ್ಣುಗಳ ರುಚಿ ಸ್ವಾದಿಷ್ಟವಾಗಿದೆ ಎಂದು ನಿಂಗನಗೌಡ ತಿಳಿಸಿದ್ದಾರೆ.