ಹಾವೇರಿ : ಜಮೀನಿನ ಪೈಪ್ಲೈನ್ ಮೇಲೆ ಮರಳು ಟ್ರ್ಯಾಕ್ಟರ್ ತರಬೇಡಿ ಎಂದಿದ್ದಕ್ಕೆ ರೈತನ ಮೇಲೆ ಹಲ್ಲೆ ಮಾಡಿರುವ ಆರೋಪ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಿಕ್ಕಕುರುವತ್ತಿ ಗ್ರಾಮದಲ್ಲಿ ಕೇಳಿಬಂದಿದೆ. ಹಲ್ಲೆಗೊಳಗಾದ ರೈತನನ್ನ 33 ವರ್ಷದ ಗೋಪಾಲಕೃಷ್ಣ ಐರಣಿ ಎಂದು ಗುರುತಿಸಲಾಗಿದೆ.
ಜಮೀನಿನಲ್ಲಿ ನೀರು ಹಾಯಿಸಲು ಹೋದಾಗ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ಮಾಡುವವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಗೋಪಾಲಕೃಷ್ಣ ಅವರು ಆರೋಪಿಸಿದ್ದಾರೆ. ಜಮೀನಿನಲ್ಲಿನ ಪೈಪ್ಲೈನ್ ಒಡೆಯುತ್ತವೆ. ಮರಳು ತುಂಬಿದ ಟ್ರ್ಯಾಕ್ಟರ್ ಇಲ್ಲಿ ತರಬೇಡಿ ಎಂದಿದ್ದಕ್ಕೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂಬುದು ಗೋಪಾಲಕೃಷ್ಣ ಅವರ ಆರೋಪವಾಗಿದೆ.
ರೈತ ಗೋಪಾಲಕೃಷ್ಣನ ತಲೆಗೆ ಬಲವಾದ ಪೆಟ್ಟುಬಿದ್ದಿದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆ ನಡೆಸಿದ ಆರು ಆರೋಪಿಗಳ ವಿರುದ್ದ ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಿಂಗರಾಜ್, ಪ್ರಜ್ವಲ್, ನಾಗರಾಜ್, ಹುಚ್ಚಪ್ಪ, ಗಣೇಶ ಮತ್ತು ರವಿ ಎಂಬುವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ದಿನದಿಂದ ದಿನಕ್ಕೆ ತುಂಗಭದ್ರಾ ನದಿ ಒಡಲು ಬಗೆಯುವವರ ಸಂಖ್ಯೆ ಅಧಿಕವಾಗುತ್ತಿದೆ. ಅಕ್ರಮ ಮರುಳುಗಾರಿಕೆಯಿಂದ ಸಾಕಷ್ಟು ಸಾವು ನೋವು ಸಂಭವಿಸುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ: ಟಿಪ್ಪರ್ ಅಡ್ಡಗಟ್ಟಿದ ರೈತರ ಮೇಲೆ ಮಾರಣಾಂತಿಕ ಹಲ್ಲೆ: ಓರ್ವ ಪೊಲೀಸ್ ವಶಕ್ಕೆ
ಟಿಪ್ಪರ್ ಅಡ್ಡಗಟ್ಟಿದ ರೈತರ ಮೇಲೆ ಮಾರಣಾಂತಿಕ ಹಲ್ಲೆ(ಪ್ರತ್ಯೇಕ ಘಟನೆ) : ತಿಂಗಳ ಹಣ ನೀಡುವಂತೆ ರೈತರು ಕ್ರಷರ್ ಮತ್ತು ಟಿಪ್ಪರ್ಗಳನ್ನು ಅಡ್ಡಗಟ್ಟಿದ ಕಾರಣಕ್ಕೆ ಅರೆಹಳ್ಳಿ ನಾರಾಯಣಸ್ವಾಮಿ ಹಾಗೂ ಮತ್ತೋರ್ವ ವ್ಯಕ್ತಿಯು ಇಬ್ಬರು ವೃದ್ಧ ರೈತರ ತಲೆಗೆ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ ಘಟನೆ ( ನವೆಂಬರ್ 18-2023) ತಮ್ಮನಾಯಕನಹಳ್ಳಿಯಲ್ಲಿ ನಡೆದಿತ್ತು.
ಕರಕಲಘಟ್ಟ ವಾಸಿ ರಾಮಚಂದ್ರಪ್ಪ (64), ಮುನೇಶ್ವರ ಸ್ವಾಮಿ ವೃತ್ತದ ನರಸಪ್ಪ (84) ಗಾಯಗೊಂಡ ರೈತರು. ಈ ಕುರಿತಂತೆ ಗಾಯಾಳು ರಾಮಚಂದ್ರಪ್ಪ ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿ ನಾರಾಯಣಸ್ವಾಮಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಮತ್ತೊಬ್ಬನಿಗೆ ಬಲೆ ಬೀಸಿದ್ದರು.
ಘಟನೆ ಹಿನ್ನೆಲೆ : ತಮ್ಮನಾಯಕನಹಳ್ಳಿ ಸರ್ವೆ ನಂ 175 ರಲ್ಲಿ ಗಾಯಾಳು ರಾಮಚಂದ್ರಪ್ಪ ಕುಟುಂಬ ವ್ಯವಸಾಯ ಮಾಡಿಕೊಂಡಿದ್ದು, ಇದೇ ಜಾಗದಲ್ಲಿ ಕ್ರಷರ್ಗಳ ಬೃಹತ್ ಲಾರಿಗಳು ಸಂಚರಿಸಲು ದಾರಿಯಿದೆ. ವಾಹನ ಸಂಚಾರದ ಧೂಳಿನಿಂದ ಬೆಳೆ ನಾಶವಾಗುತ್ತದೆ ಎಂದು ರೈತ ಆರೋಪಿಸಿದ್ದು, ಇದಕ್ಕೆ ಪರಿಹಾರವಾಗಿ ಪ್ರತಿ ಲಾರಿ ತಿಂಗಳಿಗೊಮ್ಮೆ 1000-2000 ರೂ. ಹಣ ನೀಡಿ ಸಾಗುತ್ತಿದ್ದವು. ಈ ಕುರಿತಂತೆ ಲಾರಿ ಮಾಲೀಕರೊಂದಿಗೆ ಒಪ್ಪಂದ ಕೂಡ ಮಾಡಿಕೊಳ್ಳಲಾಗಿತ್ತು.