ಹಾವೇರಿ: ಹಾವೇರಿ ಹಲವು ರಾಜಕುಟುಂಬಗಳ ಆಡಳಿತಕ್ಕೆ ಒಳಗಾದ ಜಿಲ್ಲೆ. ಇಲ್ಲಿ ಕದಂಬರಿಂದ ಹಿಡಿದು ಇತ್ತಿಚೀನ ಮೈಸೂರು ಅರಸರ ಆಳ್ವಿಕೆಯ ಕುರುಹುಗಳಿವೆ. ಅಷ್ಟೇ ಅಲ್ಲದೆ ಅನೇಕ ಸಾಮಂತರು ಸವಣೂರು ನವಾಬರು ಸಹ ಇಲ್ಲಿ ಆಡಳಿತ ಮಾಡಿದ್ದಾರೆ. ಈ ರೀತಿ ಆಡಳಿತ ನಡೆಸಿದ ರಾಜಮನೆತನಗಳು ಸಾಮಂತರು ಹಲವು ಸ್ಮಾರಕಗಳನ್ನು ಕಟ್ಟಿಸಿದ್ದಾರೆ. ಅಂತಹ ಪುರಾತನ ಸ್ಮಾರಕದಲ್ಲೊಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚೌಡಯ್ಯದಾನಪುರದ ಮುಕ್ತೇಶ್ವರ ದೇವಾಲಯ.
ಈ ಗ್ರಾಮದಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲ್ಪಟ್ಟ ಮುಕ್ತೇಶ್ವರ ದೇವಾಲಯ ತನ್ನ ಕಲಾಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. 12 ನೇ ಶತಮಾನದಲ್ಲಿ ಶರಣರಲ್ಲಿ ಒಬ್ಬರಾಗಿದ್ದ ಅಂಬಿಗರ ಚೌಡಯ್ಯ ಜನಿಸಿದ ಗ್ರಾಮ. ಈ ಚೌಡಯ್ಯದಾನಪುರ ಎನ್ನಲಾಗುತ್ತದೆ. ಶರಣ ಅಂಬಿಗರ ಚೌಡಯ್ಯ ಈ ಗ್ರಾಮವನ್ನು ಗುತ್ತಲ ಅರಸರ ಗುರುವಾಗಿದ್ದ ಶಿವದೇವಮುನಿಗೆ ದಾನವಾಗಿ ನೀಡಿದ್ದರಿಂದ ಈ ಗ್ರಾಮಕ್ಕೆ ಚೌಡಯ್ಯದಾನಪುರ ಎಂದು ಕರೆಯಲಾಗುತ್ತಿದೆ.
ಮುಕ್ತೇಶ್ವರ ದೇವಸ್ಥಾನ ಕಲ್ಯಾಣಿ ಚಾಲುಕ್ಯರ ಕಾಲದ ವಾಸ್ತುಶಿಲ್ಪದ ಮತ್ತು ಶಿಲ್ಪಕಲೆಯ ದೃಷ್ಠಿಯಿಂದ ಇದೊಂದು ಮಹತ್ವವಾದ ದೇವಾಲಯವಾಗಿದೆ ಎನ್ನುತ್ತಾರೆ ಇತಿಹಾಸಕಾರರು. ಪೂರ್ವಾಭಿಮುಖವಾಗಿರುವ ಈ ದೇವಸ್ಥಾನವನ್ನು ಜಟಾಚೋಳ ಗುತ್ತಲರಸರ ಮಾಂಡಳಿಕ ಮಲ್ಲ ಅಥವಾ ಮಲ್ಲೂಗಿ ಎಂಬುವವ ನಿರ್ಮಿಸಿದ್ದಾನೆ. ಅತ್ಯದ್ಭುತ ಕಲಾನೈಪುಣ್ಯತೆ ಇರುವ ಈ ದೇವಸ್ಥಾನವನ್ನು ಕ್ರಿಶ 1115 ರಿಂದ 1120 ರ ಮಧ್ಯೆದಲ್ಲಿ ನಿರ್ಮಿಸಿರಬಹುದು
ಗರ್ಭಗೃಹ ಅಂತರಾಳ ನವರಂಗ ಎರಡು ಮುಖಮಂಟಪನ್ನು ಈ ದೇವಸ್ಥಾನ ಹೊಂದಿದೆ. ನವರಂಗಕ್ಕೆ ಎರಡು ಪ್ರವೇಶ ದ್ವಾರಗಳಿವೆ. ಪೂರ್ವ ದ್ವಾರ
ಅಲಂಕೃತವಾದರೆ ದಕ್ಷಿಣ ದ್ವಾರವು ಕಕ್ಷಾಸನದ ಸಹಿತ ಇಳಿಬಿದ್ದ ಸೂರು ಹೊಂದಿದೆ. ತೆರೆದ ಮಂಟಪ ಹೊಂದಿದೆ. ನವರಂಗದಲ್ಲಿ ಎರಡು ದೇವಕೋಷ್ಠಗಳಿದ್ದು, ಒಂದರಲ್ಲಿ ಮಹಿಷಮರ್ದಿನಿ ಮತ್ತೊಂದರಲ್ಲಿ ಗಣೇಶನ ಮೂರ್ತಿ ಇದೆ. ಸಪ್ತಮಾತ್ರಿಕೆ ಪಾರ್ವತಿ ಸೂರ್ಯನ ಶಿಲ್ಪಗಳಿವೆ. ನವರಂಗದಲ್ಲಿ ಚಾಲುಕ್ಯಶೈಲಿಯ ನಾಲ್ಕು ಕಂಬಗಳಿವೆ. ದೇವಸ್ಥಾನದ ಪ್ರಮುಖ ಆಕರ್ಷಣೆ ಎಂದರೆ ಎತ್ತರದ ಅಧಿಷ್ಠಾನ ಮತ್ತು ಹೊರಬಿತ್ತಿಗಳು. ಅರ್ಧಕಂಬ ದೇವಕೋಷ್ಠ ಮಕರಕೋಷ್ಠವನ್ನು ಅಧಿಷ್ಠಾನ ಹೊಂದಿದೆ.
ದೇವಸ್ಥಾನ ಮೇಲ್ಭಾಗದಲ್ಲಿ ಕದಂಬ ನಾಗರ ಶಿಖರ ಎತ್ತರವಾಗಿ ನಿರ್ಮಿಸಲ್ಪಟ್ಟಿದೆ. ಶಿಖರದ ಮುಂಬಾಗ ಶುಕನಾಸಿಯಿದ್ದು ಮುಂಚಾಚಿದ ಕೀರ್ತಿಮುಖವನ್ನು ಹೊಂದಿದೆ. ಶಿಖರದಲ್ಲಿ ಸರ್ಪಕನ್ಯೆ, ಗಣೇಶ, ಸೂರ್ಯ, ವೀರಭದ್ರ, ಯಕ್ಷ ಮತ್ತು ಮದನ ವಿಗ್ರಹಗಳನ್ನು ಇಡಲಾಗಿದೆ. ದೇವಾಲಯದ ಹೊರಗಡೆ ಶಿವದೇವರ ಗದ್ದುಗೆ ಇದೆ. ಕ್ರಿಶ 1263 ರಲ್ಲಿ ಶಿವದೇವನು ಇಲ್ಲಿ ಲಿಂಗೈಕ್ಯನಾಗಿರುವ ಬಗ್ಗೆ ಶಾಸನವಿದೆ ಈ ಶಾಸನದಲ್ಲಿ ಶಿವದೇವನು ಇಲ್ಲಿ ಜನಸಿದ್ದ ಎಂಬ ಮಾಹಿತಿ ಸಿಗುತ್ತದೆ. ಗೋಮುನೇಶ್ವರ, ಮಲ್ಲಿಕಾರ್ಜುನ, ಈಶ್ವರ, ವೀರಭದ್ರ ಮತ್ತು ಕಾಳಿಯರ ಚಿಕ್ಕದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ. ಮುಕ್ತೇಶ್ವರ ದೇವಾಲಯ ಕಲ್ಯಾಣಿ ಚಾಲುಕ್ಯರ ವಿಶಿಷ್ಟ ಕೊಡುಗೆಯಾಗಿದೆ.
ತುಂಗಭದ್ರಾ ನದಿಯ ತೀರದಲ್ಲಿರುವ ಈ ದೇವಸ್ಥಾನ ಪ್ರವಾಸಿಗರ ಕಣ್ಮನ ಸೆಳೆಯುತ್ತೆ. ದೇವಸ್ಥಾನದ ದಡದಲ್ಲಿ ಅಂಬಿಗರ ಚೌಡಯ್ಯರ ಐಕ್ಯಮಂಟಪವಿದೆ. ದೇವಸ್ಥಾನದ ಸೌಂದರ್ಯವನ್ನು ನೋಡಲು ಎರಡು ಕಣ್ಣು ಸಾಲದು. ದೇವಾಲಯದಲ್ಲಿ ಕಲಾವಿದರ ಕಲಾನೈಪುಣ್ಯತೆ ಎದ್ದುಕಾಣುತ್ತದೆ. ದೇವಾಲಯ ಭಾರತೀಯ ಪುರಾತತ್ವ ಇಲಾಖೆ ಅಧೀನದಲ್ಲಿದ್ದು ಸುಂದರ ಉದ್ಯಾನವನಗಳು ದೇವಸ್ಥಾನದ ಅಂದವನ್ನು ಇಮ್ಮಡಿಗೊಳಿಸಿವೆ.
ಇದನ್ನೂ ಓದಿ: ಇಲ್ಲಿ ಜ್ಞಾನವೇ ದೇವರು: ಕಣ್ಣೂರಿನಲ್ಲಿದೆ ಜಾತ್ಯತೀತ ಪುಸ್ತಕ ದೇಗುಲ