ಹಾವೇರಿ : ಉತ್ತರಕರ್ನಾಟಕದ ಪ್ರಮುಖ ಜಾನಪದ ಕ್ರೀಡೆಗಳಲ್ಲಿ ಒಂದಾದ ಗಾಡಿ ಓಡಿಸುವ ಸ್ಪರ್ಧೆಯನ್ನು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹುರುಳಿಕೊಪ್ಪ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ರೈತರು ಹೊಲದಲ್ಲಿ ಕೃಷಿ ಕಾರ್ಯಗಳು ಮುಗಿಯುತ್ತಿದ್ದಂತೆ ದನ ಬೆದರಿಸುವ ಸ್ಪರ್ಧೆ, ಖಾಲಿ ಗಾಡಿ ಓಡಿಸುವ ಸ್ಪರ್ಧೆ ಮತ್ತು ಟಗರು ಕಾಳಗ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಾರೆ. ತಮ್ಮ ನೆಚ್ಚಿನ ರಾಸುಗಳನ್ನು ವಿಶೇಷವಾಗಿ ತಯಾರಿಸಿ ಈ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ.
ಗ್ರಾಮದ ಮಹರ್ಷಿ ವಾಲ್ಮೀಕಿ ಸೇವಾ ಸಮಿತಿ ರಾಜ್ಯಮಟ್ಟದ ಖಾಲಿ ಗಾಡಿ ಓಡಿಸುವ ಸ್ಪರ್ಧೆ ಆಯೋಜಿಸಿದೆ. ಸ್ಪರ್ಧೆಗೆ ದೂರದ ಬೆಳಗಾವಿಯಿಂದ ಹಿಡಿದು ಸುತ್ತಮುತ್ತ ತಾಲೂಕುಗಳಿಂದ ನೂರಾರು ರೈತರು ಎತ್ತುಗಳನ್ನು ತಂದಿದ್ದರು. ನಿಗದಿತ ವೇಳೆಗೆ ಹೆಚ್ಚು ದೂರ ಓಡಿದ ಗಾಡಿಗಳಿಗೆ ಸುಮಾರು 50 ಸಾವಿರ ರೂಪಾಯಿ ಬಹುಮಾನ ಸೇರಿದಂತೆ ವಿವಿಧ ಬಹುಮಾನಗಳನ್ನು ಇಡಲಾಗಿತ್ತು.
ಎತ್ತುಗಳಿಗೆ ಹುರುಳಿ ನುಚ್ಚು, ಮೊಟ್ಟೆ, ಹಾಲು ಹಿಂಡಿ ಸೇರಿದಂತೆ ವಿವಿಧ ಪೌಷ್ಠಿಕ ಆಹಾರ ತಿನ್ನಿಸಿ ಎತ್ತುಗಳನ್ನು ಗಟ್ಟಿಗೊಳಿಸಲಾಗುತ್ತದೆ. ನಂತರ ಎತ್ತುಗಳಿಗೆ ಖಾಲಿ ಗಾಡಿ ಕಟ್ಟಿ ಪ್ರತಿನಿತ್ಯ ಓಡಿಸಲಾಗುತ್ತದೆ. ಈ ರೀತಿ ತಾಲೀಮು ನಡೆಸಿದ ಹೋರಿಗಳನ್ನು ನಂತರ ಗಾಡಿ ಸ್ಪರ್ಧೆಗೆ ತರಲಾಗುತ್ತದೆ ಎಂದು ರೈತರು ತಿಳಿಸಿದರು. ರೈತರ ಹಬ್ಬಗಳೆಂದರೇ ಹಟ್ಟಿಹಬ್ಬ ಮತ್ತು ಖಾಲಿ ಗಾಡಿ ಓಡಿಸುವ ಸ್ಪರ್ಧೆ.
ಈ ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಒಂದು ಆನಂದ ಅಂತಾರೆ ರೈತರು. ಇನ್ನು ಖಾಲಿ ಗಾಡಿಗೆ ಎತ್ತುಗಳನ್ನು ಕಟ್ಟಿ ಗಾಡಿ ಸಿದ್ದವಾಗುತ್ತಿದ್ದಂತೆ ಶಿಳ್ಳೆ ಹಾಕಲಾಗುತ್ತದೆ. ಶಿಳ್ಳೆ ಹಾಕುತ್ತಿದ್ದಂತೆ ಎತ್ತುಗಳು ಗಾಡಿಯನ್ನು ಮಿಂಚಿನ ವೇಗದಲ್ಲಿ ತಗೆದುಕೊಂಡು ಹೋಗುತ್ತವೆ. ಕ್ಷಣಮಾತ್ರದಲ್ಲಿ ದೂಳೆಬ್ಬಿಸಿ ಓಡುವ ಎತ್ತುಗಳಿಗೆ ರೈತರ ಕೇಕೆ ಚಪ್ಪಾಳೆ ಮತ್ತಷ್ಟು ಹುರುಪು ನೀಡುತ್ತವೆ. ಇಂತಹ ಸ್ಪರ್ಧೆ ನೋಡಲು ಹುರುಳಿಕೊಪ್ಪ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ರೈತರು ಆಗಮಿಸಿದ್ದರು.
ಇದನ್ನೂ ಓದಿ: In Pics: ಕಂಬಳದಲ್ಲಿ ಹೊಸ ದಾಖಲೆ ಬರೆದ ಕರುನಾಡಿನ 'ಉಸೈನ್ ಬೋಲ್ಟ್' ನಿಶಾಂತ್ ಶೆಟ್ಟಿ!