ರಾಣೆಬೆನ್ನೂರು: ರಾಜ್ಯದ 15 ಕ್ಷೇತ್ರಕ್ಕೆ ಅಕ್ಟೋಬರ್ 21ರಂದು ಉಪ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಣೆಬೆನ್ನೂರು ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ವಿಧಾನಸಭೆಯ ಮಾಜಿ ಸ್ಪೀಕರ್ ಕೆ ಬಿ ಕೋಳಿವಾಡ, ಇಂದು ಕರೆದಿದ್ದ ಕೈ ಕಾರ್ಯಕರ್ತರ ಸಭೆಗೆ ಕ್ಷೇತ್ರದ ನೂರಾರು ಕಾರ್ಯಕರ್ತರು, ಕಾಂಗ್ರೆಸ್ ಹಿರಿಯ ಮುಖಂಡರು ಹಾಗೂ ಸಾರ್ವಜನಿಕರು ಆಗಮಿಸಿದ್ದರು.
ಸಭೆಯಲ್ಲಿ ಮಾತನಾಡಿದ ಕೆ ಬಿ ಕೋಳಿವಾಡ, ಈ ಬಾರಿ ತಳಮಟ್ಟದಿಂದ ಕಾಂಗ್ರೆಸ್ ಪಕ್ಷದ ಸಂಘಟನೆ ಕುರಿತು ಹಾಗೂ ಚುನಾವಣೆಯ ರೂಪರೇಷೆಗಳ ಬಗ್ಗೆ ಮುಖಂಡರ ಚರ್ಚೆ ಮಾಡಲು ಈ ಸಭೆ ಕರೆಯಲಾಗಿದೆ. ಹಿಂದೆ ನಮ್ಮ ಪಕ್ಷದ ಮೇಲೆ ಮುನಿಸಿಕೊಂಡು ಹೋದವರನ್ನು ಮತ್ತೆ ಕರೆತರುವಲ್ಲಿ ನಮ್ಮ ಮುಖಂಡರು ಕಾಳಜಿವಹಿಸಬೇಕು. ಕ್ಷೇತ್ರದಲ್ಲಿ ಹಿಂದಿನ ಶಾಸಕರ ಬಗ್ಗೆ ಅಸಮಾಧಾನವಿದೆ. ಇದರ ಹಿನ್ನೆಲೆಯಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲುತ್ತೆ ಎಂದರು. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ತಾವುಗಳು ಪಕ್ಷದ ಪರ ಕೆಲಸ ಮಾಡುವ ಮೂಲಕ ಕಾಂಗ್ರೆಸ್ ಗೆಲುವಿಗೆ ಕಾರಣವಾಗಬೇಕು ಎಂದು ಮಾಜಿ ಶಾಸಕ ಡಿ ಆರ್ ಪಾಟೀಲ್ ತಿಳಿಸಿದ್ದಾರೆ.