ಹಾವೇರಿ : ದಂಪತಿ ಸಾವಿನಲ್ಲಿಯೂ ಒಂದಾದ ಘಟನೆ ಹಾವೇರಿ ತಾಲೂಕಿನ ಕಂಚಾರಗಟ್ಟಿ ಗ್ರಾಮದಲ್ಲಿ ನಡೆದಿದೆ. 60 ವರ್ಷದ ಹೊನ್ನಮ್ಮ ಹುಳ್ಯಾಳ ಮತ್ತು 65 ವರ್ಷದ ಶೇಖರಗೌಡ ಹುಳ್ಯಾಳ ಮೃತ ದಂಪತಿ.
ಹೊನ್ನಮ್ಮ ಹುಳ್ಯಾಳ ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು. ಶನಿವಾರ ಮುಂಜಾನೆ ಅನಾರೋಗ್ಯದಿಂದ ಹೊನ್ನಮ್ಮ ಸಾವನ್ನಪ್ಪಿದ್ದಾರೆ. ಪತ್ನಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆ ಪತಿ ಶೇಖರಗೌಡ ಪ್ರಾಣಬಿಟ್ಟಿದ್ದಾರೆ. ಇಬ್ಬರು ಅನ್ಯೋನ್ಯವಾಗಿ ದಾಂಪತ್ಯ ಜೀವನ ಕಳೆದಿದ್ದರು. ಪ್ರಗತಿಪರ ರೈತರಾಗಿದ್ದ ಶೇಖರಗೌಡರ ಯಶಸ್ಸಿನ ಹಿಂದೆ ಪತ್ನಿ ಹೊನ್ನಮ್ಮ ಇದ್ದರು.
ಕಂಚಾರಗಟ್ಟಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಇವರು ದಾಂಪತ್ಯ ಜೀವನ ಮಾದರಿಯಾಗಿತ್ತು. ಇಬ್ಬರು ಒಬ್ಬರನೊಬ್ಬರು ಬಿಟ್ಟಿರುತ್ತಿರಲಿಲ್ಲ, ಈಗ ಸಾವಿನಲ್ಲಿ ಸಹ ಒಂದಾಗಿರುವುದು ಸಂಬಂಧಿಕರಿಗೆ, ಗ್ರಾಮಸ್ಥರಿಗೆ ಆಘಾತದ ಜೊತೆಗೆ ಅಚ್ಚರಿ ಮೂಡಿಸಿದೆ.
ನಾಲ್ಕು ದಶಕಗಳ ಕಾಲ ದಾಂಪತ್ಯದಲ್ಲಿ ಒಂದೇ ಒಂದು ಮನಸ್ತಾಪವಿಲ್ಲದೆ, ಅಪಸ್ವರವಿಲ್ಲದೆ ಜೀವನ ಸಾಗಿಸಿದ್ದ ಜೋಡಿ ಸಾವಿನಲ್ಲಿ ಸಹ ಒಂದಾಗಿರುವುದಕ್ಕೆ ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದರು. ಸಾವಿನಲ್ಲಿ ಒಂದಾದ ದಂಪತಿ ಶವಗಳನ್ನು ಅಕ್ಕಪಕ್ಕದಲ್ಲಿ ಕೂರಿಸಿ ಸಾರ್ವಜನಿಕರಿಗೆ ಅಂತಿಮ ದರ್ಶನದ ಅವಕಾಶ ಕಲ್ಪಿಸಲಾಗಿತ್ತು. ನಂತರ ಟ್ರ್ಯಾಕ್ಟರ್‌ನಲ್ಲಿ ದಂಪತಿ ಶವಗಳನ್ನ ಮೆರವಣಿಗೆ ಮಾಡಲಾಯಿತು.
ಇನ್ನು, ಭಜನೆ, ಹಲಗೆ ಪಟಾಕಿಯೊಂದಿಗೆ ದಂಪತಿ ಶವಗಳನ್ನು ಮೆರವಣಿಗೆ ಮಾಡಲಾಯಿತು. ನಂತರ ಶೇಖರಗೌಡ ಹುಳ್ಯಾಳರಿಗೆ ಸೇರಿದ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಈ ಅಪರೂಪದ ದಂಪತಿಯ ಅಂತಿಮಯಾತ್ರೆಗೆ ಗ್ರಾಮಸ್ಥರು, ಸಂಬಂಧಿಕರು ಕಂಬನಿ ಮಿಡಿದರು.