ಹಾವೇರಿ: ಕೊರೊನಾ ವೈರಸ್ ಕಾಣಿಸಿಕೊಂಡ ಮೇಲೂ ಜಿಲ್ಲೆಯಲ್ಲಿ ವಿದೇಶಕ್ಕೆ ಹೋಗಿ ಬಂದ 23 ಜನರಿದ್ದಾರೆ. ಅವರಲ್ಲಿ ಇಬ್ಬರಿಗೆ ಮಾತ್ರ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರ ರಕ್ತ ಮತ್ತು ಗಂಟಲಿನ ದ್ರವವನ್ನ ಪರೀಕ್ಷೆಗೆ ಶಿವಮೊಗ್ಗಕ್ಕೆ ಕಳಿಸಿಕೊಡಲಾಗಿತ್ತು ಎಂದು ಹಾವೇರಿ ಡಿಹೆಚ್ಓ ಡಾ.ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ.
ಕೊರೊನಾ ಶಂಕಿತರಾದ ಇಬ್ಬರನ್ನ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಐಸೋಲೇಶನ್ ವಾರ್ಡ್‌ನಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಉಳಿದ 21 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಅವರಿಗೆ ಮನೆಯಲ್ಲಿ ದಿನಕ್ಕೆ ಎರಡು ಬಾರಿ ತಪಾಸಣೆ ಮಾಡಲಾಗುತ್ತಿದ್ದು, ಯಾವುದೇ ರೋಗ ಲಕ್ಷಣಗಳು ಕಾಣಿಸಿಲ್ಲ ಎಂದರು.
ಕೆಲ ದಿನಗಳ ಹಿಂದೆ ವಿದೇಶದಿಂದ ಜಿಲ್ಲೆಗೆ ಬಂದಿದ್ದ ವ್ಯಕ್ತಿಯೊಬ್ಬರು ಸೋಮವಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದರು. ತಮಗೆ ಏರಪೋರ್ಟನಿಂದ ಬಂದ ಮತ್ತು ಸಾರ್ವಜನಿಕರಿಂದ ಆಶಾ ಕಾರ್ಯಕರ್ತೆಯರಿಂದ ವಿದೇಶದಿಂದ ಬರುವ ಜನರ ಬಗ್ಗೆ ಮಾಹಿತಿ ಸಿಗುತ್ತಿದೆ. ಆದರೆ ರಸ್ತೆ ಮಾರ್ಗವಾಗಿ ಬಸ್ಗಳಲ್ಲಿ ಬಂದ ವಿದೇಶಿಗರ ಮತ್ತು ನೆರೆ ರಾಜ್ಯಗಳ ಜನರ ಬಗ್ಗೆ ಮಾಹಿತಿ ಕೊರತೆ ಇದೆ. ಸಾರ್ವಜನಿಕರು ಈ ರೀತಿ ಇದ್ದರೆ ತಕ್ಷಣವೇ ಆರೋಗ್ಯ ಇಲಾಖೆ ಸಂಪರ್ಕಿಸುವಂತೆ ದೊಡ್ಡಮನಿ ತಿಳಿಸಿದ್ದಾರೆ.