ಹಾವೇರಿ: ಪ್ರತಿದೇವಸ್ಥಾನಕ್ಕೆ ಹೋಗುವ ಮುನ್ನ ಪಾದರಕ್ಷೆ ಇಲ್ಲಿಯೇ ಬಿಡಿ ಎಂಬ ಬರಹ ಸಾಮಾನ್ಯ. ಆದರೆ, ಇಲ್ಲೊಂದು ದೇವಸ್ಥಾನದಲ್ಲಿ ಪದವಿ ಮತ್ತು ಪಾದರಕ್ಷೆ ಇಲ್ಲಿಯೆ ಬಿಡ್ರಿ ಎಂದು ಬರೆಯುವ ಮೂಲಕ ಭಕ್ತರಲ್ಲಿ ಚಿಂತನೆ ಹುಟ್ಟುಹಾಕಲಾಗಿದೆ.
ಈ ರೀತಿಯ ಬರಹ ಬರೆದಿರುವುದು ಹಾವೇರಿ ನಗರದ ತೇರುಬೀದಿಯ ಹನುಮಂತ ದೇವರ ದೇವಸ್ಥಾನದಲ್ಲಿ. ಈ ದೇವಸ್ಥಾನದಲ್ಲಿ ಪಾದರಕ್ಷೆ ಬಿಡುವ ಜಾಗದಲ್ಲಿ ಈ ರೀತಿ ಬರಹ ಬರೆಯಲಾಗಿದೆ. ದೇವಸ್ಥಾನದ ಹೊರಗೆ ಪದವಿ, ಹುದ್ದೆ, ಸ್ಥಾನಮಾನ ಮತ್ತು ಬಡವ - ಶ್ರೀಮಂತ. ಆದರೆ, ದೇವಸ್ಥಾನಕ್ಕೆ ಬಂದರೆ ಇಲ್ಲಿ ಎಲ್ಲರೂ ಭಕ್ತರೇ ಎಂಬ ಅರ್ಥದಿಂದ ಈ ಬರಹ ಬರೆಸಲಾಗಿದೆ ಎನ್ನುತ್ತಾರೆ ಇಲ್ಲಿಯ ಅರ್ಚಕರು.
ಕೇವಲ ಭಕ್ತರಿಗೆ ಮಾತ್ರವಲ್ಲದೇ, ಅರ್ಚಕರಿಗೆ ಸಹ ಭಕ್ತರು ಸಮಾನರು ಎನ್ನುತ್ತಾರೆ. ಭಕ್ತರಲ್ಲಿ ಬಡವ, ಬಲ್ಲಿದ, ಶ್ರೀಮಂತ ಎಂದು ಬೇದಭಾವ ಮಾಡದೇ ಎಲ್ಲರೂ ಒಂದೇ ರೀತಿಯಲ್ಲಿ ನೋಡಬೇಕು. ಶ್ರೀಮಂತರಿಗೆ ಆತಿಥ್ಯ ಮಾಡುವುದು ಬಡ ಭಕ್ತರನ್ನ ನಿರ್ಲಕ್ಷ್ಯ ಮಾಡಬಾರದು ಎನ್ನುವ ಉದ್ದೇಶಕ್ಕಾಗಿ ಈ ರೀತಿ ಬರಹ ಬರೆಸಲಾಗಿದೆ ಎನ್ನುತ್ತಾರೆ ಅರ್ಚಕ ಉಮೇಶ್.
ಇನ್ನು ಇದೊಂದೇ ಅಲ್ಲದೆ ದೇವಸ್ಥಾನದಲ್ಲಿ ಪ್ರತಿಗೋಡೆ ಮೇಲೆ ನುಡಿಬರಹಗಳನ್ನು ಬರೆಸಲಾಗಿದೆ. ದೇವಸ್ಥಾನದ ತಡೆಗೋಡೆಯಲ್ಲಿ ಸಹ ಶ್ರೀರಾಮನ ಹೆಸರು ಬರೆಸಲಾಗಿದೆ. ಹಾವೇರಿಯ ಈ ತೇರು ಬೀದಿ ಹನುಮಂತ ದೇವರ ದೇವಸ್ಥಾನ ವ್ಯಾಸಕಾಲದಲ್ಲಿ ನಿರ್ಮಾಣಗೊಂಡಿದೆ.
ಈ ದೇವಸ್ಥಾನಕ್ಕೆ ಪೊಲೀಸ್ ವರಿಷ್ಠಾಧಿಕಾರಿಗಳು, ಉಪನ್ಯಾಸಕರು, ಗುಮಾಸ್ಥರು, ವ್ಯಾಪಾರಸ್ಥರು ಆಗಮಿಸುತ್ತಾರೆ. ದೇವಸ್ಥಾನಕ್ಕೆ ಒಮ್ಮೆ ಬಂದರೆ ಸಾಕು ಜೀವನ ಪರ್ಯಂತ ಈ ಹನುಮಂತನಿಗೆ ನಡೆದುಕೊಳ್ಳುತ್ತಾರೆ ಎನ್ನುತ್ತಾರೆ ಅರ್ಚಕರು. ದೇವಸ್ಥಾನದ ಈ ಬರಹ ಇದೀಗ ಭಕ್ತರಲ್ಲಿ ಚಿಂತನೆ ಹುಟ್ಟುಹಾಕಿದೆ.
ಓದಿ: ಜೀವದ ಉಳಿವಿಗೆ ಜೀರೋ ಟ್ರಾಫಿಕ್.. ಮುಸ್ಲಿಂ ಯುವಕನ ಹೃದಯ ಬಡಿತಕ್ಕೆ ಚಾಲನೆ ನೀಡಿದ ಹಿಂದೂ ಬಾಲಕಿ