ಹಾವೇರಿ : ಜಿಲ್ಲೆಯ ಪ್ರಮುಖ ನದಿಗಳೆಂದರೆ ವರದಾ, ತುಂಗಭದ್ರಾ, ಕುಮದ್ವತಿ ಮತ್ತು ಧರ್ಮಾ. ಉತ್ತರಕನ್ನಡ ಜಿಲ್ಲೆಯಲ್ಲಿ ಹುಟ್ಟುವ ಧರ್ಮಾ ನದಿ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೂಡಲದಲ್ಲಿ ವರದಾ ನದಿ ಸೇರುತ್ತೆ. ಆದರೆ ಈ ನದಿ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವಕಳೆದುಕೊಳ್ಳುತ್ತಿದೆ. ಆರಂಭದಲ್ಲಿ ನದಿಯಾಗಿದ್ದ ಧರ್ಮಾ ಇದೀಗ ಕಾಲುವೆ ರೂಪ ಪಡೆದುಕೊಂಡಿದೆ.
ಕಳಸಾ ಬಳಿ ಯಮಗೋಳಿ ಡ್ಯಾಂನಿಂದ ಹಾವೇರಿ ಜಿಲ್ಲೆಯ ಹಲವು ಕೆರೆಗಳನ್ನು ಧರ್ಮಾ ನದಿ ತುಂಬಿಸುತ್ತಿತ್ತು. ಇದರಿಂದ ಅಂತರ್ಜಲ ಸಮೃದ್ಧಿಯಾಗಿ ರೈತರು ತೋಟಗಾರಿಕೆ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ನಿರತರಾಗಿರುತ್ತಿದ್ದರು. ಜೊತೆ ಜೊತೆಗೆ ಅಧಿಕ ಅದಾಯಗಳಿಸುತ್ತಿದ್ದರು.
ಈ ನದಿ ಇದೀಗ ಹಾನಗಲ್‌ನವರೆಗೆ ಮಾತ್ರ ತನ್ನ ವ್ಯಾಪ್ತಿಯನ್ನು ಒಳಗೊಂಡಿದೆ. ಹಾನಗಲ್‌ನಿಂದ ಕೂಡಲದವರೆಗೆ ಧರ್ಮಾ ನದಿ ಕಾಣೆಯಾಗಿದೆ. ಒತ್ತುವರಿ ಇತರ ಕಾರಣಗಳಿಂದ ನದಿ ಕಣ್ಮರೆಯಾಗುತ್ತಿದ್ದ, ಒಂದು ಕಾಲದಲ್ಲಿ ಹಾವೇರಿ ಜಿಲ್ಲೆಯ ಎರಡು ತಾಲೂಕುಗಳ ರೈತರು ಧರ್ಮಾ ನದಿಯನ್ನೇ ಅವಲಂಬಿಸಿದ್ದರು. ಆದರೆ ಇದೀಗ ಹಾನಗಲ್ ನಗರದ ಸಮೀಪ ಮಾತ್ರ ಕಾಣಿಸಿಕೊಳ್ಳುವ ಧರ್ಮಾ ಬೇಸಿಗೆಯಲ್ಲಿ ಕಣ್ಮರೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ನದಿ ಪೂರ್ತಿಯಾಗಿ ಕಣ್ಮರೆಯಾದರು ಆಶ್ಚರ್ಯಪಡಬೇಕಾಗಿಲ್ಲಾ.