ಹಾವೇರಿ : ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಅಗ್ನಿ ಅವಘಡಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ.
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಚಂದಾಪುರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 50 ಎಕರೆ ಕಬ್ಬು ಸುಟ್ಟು ಕರಕಲಾಗಿದೆ. ಸಿದ್ದಪ್ಪ,ಗುಡ್ಡಪ್ಪ,ಈರಯ್ಯ,ನಾಗಪ್ಪ ಮತ್ತು ನಿಂಗಪ್ಪ ಎಂಬ ರೈತರಿಗೆ ಸೇರಿದ್ದ ಕಬ್ಬಿನ ಜಮೀನು ಬೆಂಕಿಗಾಹುತಿಯಾಗಿದೆ.
ಜಮೀನಿನಲ್ಲಿ ವಿದ್ಯುತ್ ತಂತಿಯಿಂದ ಶಾರ್ಟ್ ಸರ್ಕ್ಯೂಟ್‌ನಿಂದ ಹತ್ತಿದ ಬೆಂಕಿ ಅಕ್ಕಪಕ್ಕದ ರೈತರ ಜಮೀನುಗಳಲ್ಲಿನ ಕಬ್ಬನ್ನು ಸಹ ಸುಟ್ಟು ಹಾಕಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಹೀಗಿದ್ದರೂ ಸಹ ಬೆಂಕಿ ಹತೋಟಿಗೆ ಬರಲಿಲ್ಲ.
ಇದರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಕಬ್ಬು ನಾಶವಾಗಿದೆ. ಸರ್ಕಾರ ಪರಿಹಾರ ನೀಡುವಂತೆ ನೊಂದ ರೈತರು ಒತ್ತಾಯಿಸಿದ್ದಾರೆ. ಬಂಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇನ್ನೊಂದೆಡೆ ಹಾವೇರಿ ಸಮೀಪದ ಹೊಂಬರಡಿ ಗ್ರಾಮದಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಮೂರುವರೆ ಲಕ್ಷದ ಮೌಲ್ಯದ ಮೆಕ್ಕೆಜೋಳದ ತೆನೆಗಳು ಸುಟ್ಟು ಕರಕಲಾಗಿವೆ. ಗ್ರಾಮದ ರುದ್ರಗೌಡ ಚೆನ್ನಗೌಡರ ಎಂಬ ರೈತ 12 ಎಕರೆಯಲ್ಲಿ ಮೆಕ್ಕೆಜೋಳ ಬೆಳೆದಿದ್ದ ಸುಮಾರು ಎರಡು ನೂರು ಕ್ವಿಂಟಲ್ ಗೋವಿನಜೋಳ ಬರುವ ನಿರೀಕ್ಷೆ ಇಟ್ಟುಕೊಂಡಿದ್ದ. ಆದರೆ, ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ರಾಶಿ ಪೂರ್ತಿ ಸುಟ್ಟಿದೆ.
ಸುಮಾರು ಮೂರುವರೆ ಲಕ್ಷ ರೂಪಾಯಿ ಮೌಲ್ಯದ ಮೆಕ್ಕೆಜೋಳ ಹಾಳಾಗಿದೆ. ಈ ಕುರಿತಂತೆ ರೈತ ರುದ್ರಗೌಡ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಕಿಡಿಗೇಡಿಗಳನ್ನು ಬಂಧಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾನೆ.