ರಾಣೆಬೆನ್ನೂರು: ನಗರದ ಎಪಿಎಂಸಿ ಮಾರುಕಟ್ಟೆಗೆ ಒಂದು ವಾರದಿಂದ ಹತ್ತಿ ಲಗ್ಗೆಯಿಡುತ್ತಿದ್ದು, ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ.
ಸತತ ಮಳೆಯಿಂದ ಹತ್ತಿ ಬೆಳೆ ಹಾನಿಯಾದರೂ ಕೂಡ ಅಲ್ಪ ಭೂಮಿಯಲ್ಲಿ ಅಳಿದುಳಿದ ಬೆಳೆಯಲ್ಲಿ ರೈತರು ಭರಪೂರ ಹತ್ತಿ ಬೆಳೆದಿದ್ದಾರೆ. ಸದ್ಯ ಹತ್ತಿ ಮಾರಾಟ ಮಾಡಲು ರೈತರು ಮುಂದಾಗಿದ್ದು, ಎಪಿಎಂಸಿ ಮಾರುಕಟ್ಟೆಗೆ, ಒಂದೇ ವಾರದಲ್ಲಿ ಸುಮಾರು 12,500 ಕ್ವಿಂಟಲ್ ಹತ್ತಿ ಆಗಮಿಸಿದ್ದು ಎಲ್ಲರನ್ನೂ ನಿಬ್ಬೆರಗುಗೊಳಿಸಿದೆ.
ಹತ್ತಿ ಮಾರುಕಟ್ಟೆ ರಾಣೆಬೆನ್ನೂರ ನಗರದಲ್ಲಿ ಸೋಮವಾರ ಮತ್ತು ಗುರುವಾರದಂದು ಎರಡು ಬಾರಿ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕಿನ ರೈತರು ಹತ್ತಿ ಮಾರುಕಟ್ಟೆಗೆ ಧಾವಿಸುತ್ತಿದ್ದು, ರಾಣೆಬೆನ್ನೂರು ಎಪಿಎಂಸಿ ಮಾರುಕಟ್ಟೆಗೆ ದಾಖಲೆ ಮೀರಿದ ಹತ್ತಿ ಪೂರೈಕೆಯಾಗಿದೆ.
ವಾರದಲ್ಲಿ 12,560 ಕ್ವಿಂಟಲ್ ಹತ್ತಿ ಮಾರಾಟ
ಈ ವಾರದ ಮಾರುಕಟ್ಟೆಯಲ್ಲಿ ಸುಮಾರು 12569 ಕ್ವಿಂಟಲ್ ಹತ್ತಿ ಆಗಮಿಸಿದೆ. ಸೋಮವಾರ ದಿನದ ಮಾರುಕಟ್ಟೆಗೆ ಸುಮಾರು 3,241 ಅಂಡಿಗೆಗಳು ಆಗಮಿಸಿ ಮಾರಾಟವಾಗಿವೆ. ಇದರಲ್ಲಿ ಹೆಚ್ಚಾಗಿ ಬಿಟಿ ಹತ್ತಿಯೆ ಜಾಸ್ತಿಯಾಗಿದ್ದು, ಪ್ರತಿ ಕ್ವಿಂಟಲ್ ಹತ್ತಿ ಬೆಲೆ 5,111 ರಿಂದ 5,555 ರೂ ಗಳ ವರಗೆ ಮಾರಾಟವಾಗಿದೆ.
ಗುರುವಾರ ಮಾರುಕಟ್ಟೆ ಹಿನ್ನೆಲೆ ಇಂದು ಸಹ ಸುಮಾರು 2,590 ಹತ್ತಿ ಹಂಡಿಗೆಗಳು ಮಾರಾಟವಾಗಿವೆ. ಇಂದು ಕೂಡ ಪ್ರತಿ ಕ್ವಿಂಟಲ್ ಹತ್ತಿಗೆ 5,010 ರಿಂದ 6,600 ವರಗೆ ಮಾರಾಟವಾಗಿದೆ. ಒಂದೇ ವಾರದಲ್ಲಿ ಸುಮಾರು 6.5 ಕೋಟಿ ಹತ್ತಿ ವ್ಯವಹಾರ ನಡೆದಿದೆ.