ಹಾವೇರಿ: ನಗರಸಭೆಗೆ ಮಂಜೂರಾದ ಅನುದಾನದ ಹಂಚಿಕೆಯಲ್ಲಿ ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಹಾವೇರಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ನೆಹರು ಓಲೇಕಾರ್ ಮತ್ತು ಅವರ ಇಬ್ಬರು ಪುತ್ರರನ್ನು ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ದೋಷಿ ಎಂದು ತೀರ್ಮಾನಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಭ್ರಷ್ಟಾಚಾರ ತಡೆ ಕಾಯ್ದೆಯಡಿ ಶಿಕ್ಷೆ: 50 ಲಕ್ಷ ಮೊತ್ತದ ಕಾಮಾಗಾರಿಗಳನಮ್ನು ಪುತ್ರರಿಗೆ ನೀಡಿದ ಆರೋಪ ಹಾಗೂ ಆಡಳಿತ ಅವಧಿಯಲ್ಲಿ ಸ್ವಜನ ಪಕ್ಷಪಾತ ಆರೋಪದ ಹಿನ್ನೆಲೆ ಜನಪ್ರತಿನಿಧಿಗಳ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಹಾಗೂ 2 ಸಾವಿರ ರೂಪಾಯಿ ದಂಡ ವಿಧಿಸಿದೆ. ನೆಹರು ಓಲೇಕಾರ್ ಅವರಿಗೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಶಿಕ್ಷೆ ಪ್ರಕಟವಾಗಿದೆ. ಅಲ್ಲದೇ ಶಾಸಕರ ಪುತ್ರರಾದ ಮಂಜುನಾಥ ಓಲೇಕಾರ ಹಾಗೂ ದೇವರಾಜ್ ಓಲೇಕಾರ ಅವರಿಗೂ ಸಹ ಶಿಕ್ಷೆ ಪ್ರಕಟಿಸಿದೆ. ಶಿಕ್ಷೆಯ ಪ್ರಮಾಣ ಮೂರು ವರ್ಷಕ್ಕಿಂತ ಕಡಿಮೆ ಇರುವ ಕಾರಣ ಜನಪ್ರತಿನಿಧಿಗಳ ನ್ಯಾಯಾಲಯದಿಂದಲೇದಲೇ ಶಾಸಕರಿಗೆ ಜಾಮೀನು ಮಂಜೂರು ಮಾಡಲಿದೆ ಎಂದು ತಿಳಿದು ಬಂದಿದೆ.
ಪ್ರಕರಣವನ್ನು ದಾಖಲಿಸಿದ ಆರ್ಟಿಐ ಕಾರ್ಯಕರ್ತ ಶಶೀಧರ ಹಳ್ಳಿಕೆರೆ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. " ಕಳೆದ 10 ವರ್ಷಗಳಿಂದ ಮಾಡಿದ ಹೋರಾಟಕ್ಕೆ ಜಯ ಸಿಕ್ಕಿದೆ. ಸ್ವಜನ ಪಕ್ಷಪಾತ ಎಸಗಿರುವ ಹಿನ್ನೆಲೆ ಶಾಸಕರಿಗೆ ಶಿಕ್ಷೆ ಆಗಿದೆ. 09-10-2012 ರಂದು ಕೇಸ್ ದಾಖಲು ಮಾಡಲಾಗಿತ್ತು. ಹಾವೇರಿ ಜಿಲ್ಲಾ ಕೋರ್ಟ್ನಲ್ಲಿದ್ದ ಪ್ರಕರಣ ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಲಕ್ಕೆ 2021ರಲ್ಲಿ ವರ್ಗಾವಣೆ ಆಗಿತ್ತು. ಹಾವೇರಿ ನಗರಸಭೆಗೆ ಬಂದಿದ್ದ ಅನುದಾನವನ್ನು ಮಕ್ಕಳ ಹೆಸರಿನಲ್ಲಿ ಸುಳ್ಳು ಬಿಲ್ ತೆಗೆದಿದ್ದರು. ಗುತ್ತಿಗೆದಾರರೆಂದು ಮಕ್ಕಳ ಹೆಸರಿನಲ್ಲೂ ಸುಳ್ಳು ದಾಖಲೆ ಪ್ರಮಾಣ ಪತ್ರ ಸೃಷ್ಟಿ ಮಾಡಿದ್ದರು. ಕ್ಲಾಸ್ 2 ಇದ್ದ ಪ್ರಮಾಣ ಪತ್ರವನ್ನ ಕ್ಲಾಸ್ 1 ಗುತ್ತಿಗೆದಾರ ಎಂದು ತೊರಿಸಿ ಭ್ರಷ್ಟಾಚಾರ ಮಾಡಿದರು. 5 ಕೊಟಿ 35 ಲಕ್ಷ ರೂಪಾಯಿ ಕೆಲಸ ಮಾಡದೆ ದುಡ್ಡು ಪಡೆದಿದ್ದರು. ಶಾಸಕರಾದವರು ಅವರ ಅಭಿವೃದ್ಧಿ ಕೆಲಸದ ಅನುದಾನವನ್ನು ಮಕ್ಕಳಿಗೆ ಕೊಡಬಾರದು. ಆದರೆ ಕಾನೂನು ಧಿಕ್ಕರಿಸಿ ಹಣದ ಆಸೆಗೆ ಶಾಸಕರು ಮಕ್ಕಳನ್ನು ಗುತ್ತಿಗೆದಾರರನ್ನಾಗಿ ದಾಖಲೆ ಸೃಷ್ಟಿ ಮಾಡಿದ್ದರು. ಆದರೆ ನ್ಯಾಯಾಲಯ ತಪ್ಪಿಸ್ಥರಿಗೆ ಶಿಕ್ಷೆ ಪ್ರಕಟ ಮಾಡಿದೆ. ಇದರಿಂದ ನಮಗೆ ಸಂತೋಷವಾಗಿದೆ" ಎಂದು ಹೇಳಿದರು.
ಹಾವೇರಿ ಶಾಸಕ ನೆಹರು ಓಲೇಕಾರ ತಮ್ಮ ಶಾಸಕ ಸ್ಥಾನದ ಪ್ರಭಾವ ಬಳಸಿ, ಮಕ್ಕಳಿಗೆ ಗುತ್ತಿಗೆ ನೀಡಿದ್ದು ಹಾಗೂ ಸ್ವಜನ ಪಕ್ಷಪಾತ ಮಾಡಿದ ಆರೋಪದ ಹಿನ್ನೆಲೆ ಜನಪ್ರತಿನಿಧಿಗಳ ನ್ಯಾಯಾಲಯ ಶಿಕ್ಷೆಯನ್ನು ಪ್ರಕಟಿಸಿದೆ. 50 ಲಕ್ಷ ರೂ. ಮೊತ್ತದ ಕಾಮಗಾರಿ ಕಾಂಕ್ರೀಟ್ ರಸ್ತೆ ಸೇರಿದಂತೆ ಕೆಲವು ಕಾಮಗಾರಿಗಳಲ್ಲಿ ಶಾಸಕರಾದ ನೆಹರು ಓಲೇಕಾರ್ ಅವರ ವಿರುದ್ಧ ಸ್ವಜನ ಪಕ್ಷಪಾತದ ಆರೋಪ ಕೇಳಿ ಬಂದಿದ್ದು, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.
ಇದನ್ನೂ ಓದಿ: ಸರ್ಕಾರಕ್ಕೆ ಹಾಗೂ ನೆಹರು ಓಲೇಕಾರ್ಗೆ ಹೈಕೋರ್ಟ್ ನೋಟಿಸ್!