ಹಾವೇರಿ: ಕೊರೊನಾ ಭೀತಿ ಹಿನ್ನೆಲೆ ಮೃತ ವ್ಯಕ್ತಿಯ ಶವಸಂಸ್ಕಾರ ಮಾಡಲು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹಿಂದೇಟು ಹಾಕಿದ್ದರು. ಆಗ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಪಿಡಿಓ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿ ಶವಸಂಸ್ಕಾರ ನೆರವೇರಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಬ್ಯಾಡಗಿ ತಾಲೂಕಿನ ಹೆಡಿಗ್ಗೊಂಡ ಗ್ರಾಮದ ಹುಚ್ಚಪ್ಪ ಗೋಣಿ(50) ಎಂಬುವರು ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದರು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಕೊರೊನಾ ಶಂಕೆ ವ್ಯಕ್ತಪಡಿಸಿ ಆರೋಗ್ಯ ಇಲಾಖೆ ಮೃತನ ಸ್ವ್ಯಾಬ್ ಲ್ಯಾಬ್ ಗೆ ಕಳಿಸಿತ್ತು. ಸದ್ಯ ವರದಿ ನೆಗೆಟಿವ್ ಬಂದಿದೆ.
ಅದರೆ, ಕೊರೊನಾ ಹಾವಳಿಯಿಂದ ಆತಂಕಕ್ಕೀಡಾಗಿರುವ ಕುಟುಂಬಸ್ಥರು, ಗ್ರಾಮಸ್ಥರು ಅಂತ್ಯಸಂಸ್ಕಾರ ನೆರವೇರಿಸಲು ಮುಂದಾಗಲಿಲ್ಲ. ಹೀಗಾಗಿ ಪಿಡಿಓ, ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಪಿಪಿಇ ಕಿಟ್ ಸೇರಿದಂತೆ ಸುರಕ್ಷತಾ ಕ್ರಮಗಳನ್ನ ಕೈಗೊಂಡು ಅಗ್ನಿಸ್ಪರ್ಶ ಮಾಡಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಈ ವೇಳೆ ಕೆಲ ಕುಟುಂಬಸ್ಥರು, ಗ್ರಾಮಸ್ಥರು ಸ್ಥಳದಲ್ಲಿ ನೆರೆದಿದ್ದರೂ ದೂರದಿಂದಲೇ ವೀಕ್ಷಿಸಿ ಅಲ್ಲಿಂದ ಹೊರಟುಹೋದರು ಎಂದು ತಿಳಿದುಬಂದಿದೆ.