ರಾಣೆಬೆನ್ನೂರು: ಗಣೇಶ ಹಬ್ಬಕ್ಕೆ ತಿಂಗಳ ಮುಂಚೆ, ನಗರದಲ್ಲೆಡೆ ಬೃಹತ್ ಗಣೇಶ ಮೂರ್ತಿಗಳ ತಯಾರಿಯಲ್ಲಿ ಕಲಾವಿದರು, ಕುಂಬಾರ ಕುಟುಂಬದವರು ತೊಡಗಿರುತ್ತಿದ್ದರು. ಆದರೆ ಈ ಬಾರಿ ಕೊರೊನಾ ಹಿನ್ನೆಲೆ ಮೂರ್ತಿಗಳ ತಯಾರಿಕೆ ಪ್ರಮಾಣ ಕಡಿಮೆಯಾಗಿದೆ.
ದೇಶದಲ್ಲಿ ಗಣೇಶೋತ್ಸವ ಬಂದರೆ ಸಾಕು, ಗಣೇಶ ಮೂರ್ತಿಗಳಿಗಾಗಿ ರಾಜ್ಯದ ವಿವಿಧ ಜಿಲ್ಲೆ, ಅಂತರ್ ರಾಜ್ಯಗಳಿಂದ ಮೂರ್ತಿಗಳನ್ನು ತರಿಸಲಾಗುತ್ತಿತ್ತು. ಆದರೆ, ಈ ಬಾರಿ ಈ ಸಂಭ್ರಮಗಳಿಗೆ ಕೊರೊನಾ ಕಡಿವಾಣ ಹಾಕಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಅನುಮತಿ ಕೊಡುವುದು ಅನುಮಾನವಾಗಿರುವುದರಿಂದ ಮೂರ್ತಿ ತಯಾರಕರು ದೊಡ್ಡ ಪ್ರಮಾಣದ ಗಣೇಶ ತಯಾರಿಕೆಯಿಂದ ಹಿಂದೆ ಸರಿದಿದ್ದಾರೆ.
ಗಣೇಶ ಹಬ್ಬದಲ್ಲಿ ಪ್ರತಿ ವರ್ಷ ನೂರಾರು ದೊಡ್ಡ ಗಾತ್ರದ ಮೂರ್ತಿಗಳು ಮಾರಾಟವಾಗುತ್ತಿದ್ದವು. ಈ ಮೂರ್ತಿಗಳನ್ನು ಮುಂಗಡವಾಗಿ ಬುಕಿಂಗ್ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಇರುವುದರಿಂದ ಯಾವುದೇ ಸಂಘ ಸಂಸ್ಥೆಯವರು ಮುಂಗಡ ಹಣ ಕೊಟ್ಟು ಮೂರ್ತಿಗಳನ್ನು ಕಾಯ್ದಿರಿಸಿಲ್ಲ ಎನ್ನುತ್ತಾರೆ ಮೂರ್ತಿ ತಯಾರಕ ರಾಘವೇಂದ್ರ ತ್ರಾಸದ.
ರಾಣೆಬೆನ್ನೂರ್ ಕಾ ರಾಜಾ ಗಣೇಶೋತ್ಸವ ಮೊಟಕು: ನಗರದಲ್ಲಿ ವಂದೇ ಮಾತರಂ ಸ್ವಯಂ ಸೇವಕ ಸಂಘದ ವತಿಯಿಂದ ಪ್ರತಿ ವರ್ಷವೂ "ರಾಣೆಬೆನ್ನೂರ್ ಕಾ ರಾಜಾ" ಎಂಬ ಸುಮಾರು 40 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಆದರೆ ಕೊರೊನಾ ಹಿನ್ನೆಲೆ ಈ ಬಾರಿ ಗಣೇಶೋತ್ಸವನ್ನು ಮೊಟಕುಗೊಳಿಸಲಾಗಿದೆ. ಈ ಹಬ್ಬದ ಖರ್ಚನ್ನು ಕೊರೊನಾ ವಾರಿಯರ್ಸ್ಗೆ ನೀಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಪ್ರಕಾಶ್ ಬುರಡಿಕಟ್ಟಿ ತಿಳಿಸಿದರು.