ಹಾವೇರಿ: ಹಲಗೇರಿ ಗ್ರಾಮದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಹೌದು, ಜಿಲ್ಲೆಯ ರಾಣೆಬೆನ್ನೂರು ನಗರಕ್ಕೆ ಮಾತ್ರ ಸೀಮಿತವಾಗಿದ್ದ ಮಹಾಮಾರಿ ಕೊರೊನಾ ಇದೀಗ ಹಳ್ಳಿಯತ್ತ ಮುಖ ಮಾಡಿದೆ. ಸದ್ಯ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದ್ದು, ಹಲಗೇರಿ ಗ್ರಾಮಕ್ಕೆ ಈ ಪ್ರಕರಣ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಮಹಿಳೆಯಲ್ಲಿ ಸೋಂಕು ತಗುಲಿದ ಹಿನ್ನೆಲೆ, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸುತ್ತಮುತ್ತಲಿನ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ, ಕೊರೊನಾ ಪಾಸಿಟಿವ್ ಪತ್ತೆಯಾದ ಮಹಿಳೆ ಮನೆ ಮತ್ತು ಹಲಗೇರಿಯ ಜನತಾ ಪ್ಲಾಟ್ ನಗರದ 100 ಮೀಟರ್ ಪ್ರದೇಶವನ್ನು ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ.
ಸ್ವಯಂ ಲಾಕ್ ಡೌನ್ ಮಾಡಲು ಗ್ರಾಮಸ್ಥರ ನಿರ್ಣಯ: ಹಲಗೇರಿ ಗ್ರಾಮದಲ್ಲಿ ಕೊರೊನಾ ಪತ್ತೆಯಾದ ಹಿನ್ನೆಲೆ, ಗ್ರಾಮಸ್ಥರು ಇಡೀ ಗ್ರಾಮವನ್ನು ಲಾಕ್ ಡೌನ್ ಮಾಡಲು ಮುಂದಾಗಿದ್ದಾರೆ. ಗ್ರಾಮದಲ್ಲಿ ದಿನಸಿ ಅಂಗಡಿ ಮತ್ತು ಔಷಧಿ ಅಂಗಡಿಗೆ ವಿನಾಯಿತಿ ನೀಡಲಾಗಿದ್ದು, ಇನ್ನುಳಿದ ಬಹುತೇಕ ಅಂಗಡಿ-ಮುಂಗಟ್ಟುಗಳನ್ನು ಲಾಕ್ ಡೌನ್ ಮಾಡಲು ಮಾಲೀಕರು ತಿಳಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.