ಹಾವೇರಿ: ತೀವ್ರ ಕುತೂಹಲ ಮೂಡಿಸಿದ್ದ ರಾಣೆಬೆನ್ನೂರು ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ಸ್ಥಾನ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ.
ಇಂದು ಎಪಿಎಂಸಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಹರನಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರಪ್ಪ ಬಸವರಾಜಪ್ಪ ಕಳಸದ ಅವರು 9 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು.
ಒಟ್ಟು 17 ಸದಸ್ಯರ ಬಲ ಹೊಂದಿದ್ದ ಎಪಿಎಂಸಿ ಅಧ್ಯಕ್ಷ ಗಾದಿಗೆ ಕಾಂಗ್ರೆಸ್ ಪಕ್ಷದ 09 ಸದಸ್ಯರು ಅಭ್ಯರ್ಥಿ ಪರವಾಗಿ ಮತ ಚಲಾಯಿಸುವ ಮೂಲಕ ಆಯ್ಕೆ ಮಾಡಿದ್ದಾರೆ. ಇನ್ನೂ ಬಿಜೆಪಿ ಪಕ್ಷದಲ್ಲಿ 8 ಸದಸ್ಯರು ಹೊಂದಿದ್ದು ಇದರಲ್ಲಿ 7 ಸದಸ್ಯರು ಮಾತ್ರ ಬಿಜೆಪಿಗೆ ಅಭ್ಯರ್ಥಿ ಮತ ಹಾಕಿದ್ದು, ಒಂದು ಮತ ತಿರಸ್ಕೃತಗೊಂಡಿದೆ.
ನಂತರ ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಬಸವನಗೌಡ ಕೊಟೂರು ಅಧಿಕೃತವಾಗಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರಪ್ಪ ಬಸವರಾಜ ಕಳಸದ ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿ, ಆಯ್ಕೆ ಮಾಡಿದರು.
ಅಧ್ಯಕ್ಷ ಸ್ಥಾನ ಸ್ವೀಕರಿಸಿ ಮಾತನಾಡಿದ ಚಂದ್ರಶೇಖರಪ್ಪ ಕಳಸದ ರೈತರ ಸಮಸ್ಯೆಗಳ ಬಗ್ಗೆ ತ್ವರಿತ ಗತಿಯಲ್ಲಿ ಬಗೆಹರಿಸಲಾಗುವುದು. ರೈತರಿಗೆ ಸಿಗುವ ಸೌಲಭ್ಯಗಳನ್ನು ಅವರಿಗೆ ನೇರವಾಗಿ ತಲುಪುವ ರೀತಿಯಲ್ಲಿ ಅವಕಾಶ ಕಲ್ಪಿಸಲಾಗುವುದು. ಇನ್ನೂ ರಾಣೆಬೆನ್ನೂರು ಹೊರ ವಲಯದಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಮಾರುಕಟ್ಟೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ, ಸರ್ಕಾರದಿಂದ ಇನ್ನಷ್ಟು ಅನುದಾನ ತರುವ ಮೂಲಕ ಅಭಿವೃದ್ಧಿ ಮಾಡುತ್ತೆನೆ ಎಂದು ಭರವಸೆ ನೀಡಿದರು.