ಹುಬ್ಬಳ್ಳಿ: ಬಿಜೆಪಿ ಪಕ್ಷದಲ್ಲಿ ಸ್ಪಷ್ಟವಾದ ನಿಲುವು ಇದ್ದು, ಸಿಎಂ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ನಾನು ಚಿರಋಣಿ ಎಂದು ಸಂತಸ ವ್ಯಕ್ತಪಡಿಸಿದರು. ನಡ್ಡಾ ಹೇಳಿಕೆ ವಿಚಾರವಾಗಿ ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆ.ಪಿ. ನಡ್ಡಾ ಅವರು ನನ್ನ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟು ಒಳ್ಳೆಯ ಮಾತು ಹೇಳಿದ್ದಾರೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದಾಗ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಹೋಗುವುದಾಗಿ ಹೇಳಿದ್ದೆ ಎಂದ ಅವರು ಕೇಂದ್ರ ಸಂಸದೀಯ ಮಂಡಳಿ ಮತ್ತು ಶಾಸಕರು ಸಿಎಂ ಆಯ್ಕೆ ಮಾಡುತ್ತಾರೆ. ಹೀಗಾಗಿ ನಡ್ಡಾ ಅವರು ಹೇಳಿದ ಮಾತಿಗೆ ನಾನು ಚಿರಋಣಿಯಾಗಿರುತ್ತೇನೆ. ಈ ಮೂಲಕ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತೇನೆ ಎಂದು ತಿಳಿಸಿದರು.
ಪ್ರವಾಹದ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿಯವರು ರಾಜ್ಯಕ್ಕೆ ಬಂದಿಲ್ಲ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಉತ್ತರಿಸಿದ ಅವರು, ರಾಜ್ಯದಲ್ಲಿ ಪ್ರವಾಹ ಬಂದಂತಹ ಸಂದರ್ಭದಲ್ಲಿ ಹೆಚ್ಚಿನ ಅನುದಾನ ನೀಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ. ಈ ಹಿಂದೆ ಪ್ರಿಯಾಂಕಾ ಗಾಂಧಿಯವರ ಸರ್ಕಾರವಿದ್ದಾಗ ಮನೆ ಬಿದ್ದರೆ ಎರಡು ಸಾವಿರ ಕೊಡುತ್ತಿದ್ದರು ಎಂದ ಅವರು ಅತಿವೃಷ್ಟಿ ಪರಿಹಾರ ಮೋದಿ ಕಾಲದಲ್ಲಿ ಹೆಚ್ಚಿಸಲಾಗಿದೆ.
ಅತೀ ಹೆಚ್ಚು ರೈತರ ಆತ್ಮಹತ್ಯೆ ಆಗಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ. ಅಂದು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಬಂದೋದ್ರಾ ಎಂದು ಪ್ರಶ್ನಿಸಿದ ಅವರು, ಯಾವುದು ಸೂಕ್ತವಲ್ಲವೋ ಅದನ್ನು ಮಾತನಾಡಿ, ಜನರನ್ನು ಮರಳು ಮಾಡಲು ಸಾಧ್ಯವಿಲ್ಲ. ಜನತೆಗೆ ಗೊತ್ತಿರುವ ವಿಚಾರವಿದು. ಪ್ರಿಯಾಂಕಾ ಗಾಂಧಿಗೆ ಕಾಂಗ್ರೆಸ್ನವರು ಸರಿಯಾದ ಮಾಹಿತಿ ನೀಡಿಲ್ಲ ಎಂದು ಸಿಎಂ ತಿರುಗೇಟು ನೀಡಿದರು. ಇನ್ನು ರೇಡ್ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂಬ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ, ಕಳ್ಳನ ಜೀವ ಹುಳ್ಳುಳ್ಳಗೆ ಎಂದು ವ್ಯಂಗ್ಯವಾಡಿದರು.
ದಾವಣಗೆರೆ/ಮೋದಿಯವರ ಮನ್ ಕಿ ಬಾತ್ ಆಲಿಸಿದ ಜೆಪಿ ನಡ್ಡಾ: ಪ್ರತಿ ತಿಂಗಳು ಆಲ್ ಇಂಡಿಯಾ ರೇಡಿಯೋ ಮೂಲಕ ದೇಶದ ಸಾಧಕರ ಮನದ ಮಾತನ್ನು ಕೇಳುವ ಪ್ರಯುಕ್ತ ಆರಂಭಿಸಿದ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಇಂದು ನೂರನೇ ಸಂಚಿಕೆಯಾಗಿದ್ದರಿಂದ ಸಾಕಷ್ಟು ಸಾಧಕರನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.
ಈ ವೇಳೆ ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಬಿಜೆಪಿ ಅಭ್ಯರ್ಥಿ ಎಂ ಪಿ ರೇಣುಕಾಚಾರ್ಯ ನಿವಾಸದ ಆವರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮೋದಿಯವರ ಮನ್ ಕಿ ಬಾತ್ ಆಲಿಸಿದರು. ಮನ್ ಕೀ ಬಾತ್ ನ 100 ನೇ ಸಂಚಿಕೆಯಾಗಿದ್ದು ತಮಿಳುನಾಡು, ಜಮ್ಮುಕಾಶ್ಮೀರ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಸಾಧನೆ ಮಾಡಿದವರೊಂದಿಗೆ ಮಾತನಾಡಿದ ಪ್ರಧಾನಿ ಮೋದಿಯವರ ಕಾರ್ಯಕ್ರಮವನ್ನು ವೀಕ್ಷಿಸಲು ಲೈವ್ ಕಾರ್ಯಕ್ರಮವನ್ನು ಹೊನ್ನಾಳಿಯಲ್ಲಿ ಆಯೋಜನೆ ಮಾಡಲಾಗಿತ್ತು.
ಈ ವೇಳೆ ಜೆ ಪಿ ನಡ್ಡಾ ಅವರು ಹಾಗು ಶಾಸಕ ರೇಣುಕಾಚಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಸಂಸದ ಜಿಎಂ ಸಿದ್ದೇಶ್ವರ್, ಎಮ್ಎಲ್ಸಿ ನವೀನ್ ಭಾಗಿಯಾಗಿದ್ದರು. ಇನ್ನು ನಮೋ ಅವರ ಮನ್ ಕಿ ಬಾತ್ ಕೇಳಲು ಹೊನ್ನಾಳಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಮನ್ ಕಿ ಬಾತ್ ಆಲಿಸಿದ ಬಳಿಕ ಚಪ್ಪಾಳೆ ಶಿಳ್ಳೆ ಹಾಕಿದ್ರು, ಜೈ ಮೋದಿ ಜೀ ಎಂಬ ಘೋಷಣೆ ಕೂಗಿದ್ರು.
ಹಾವೇರಿ/ಮನ್ ಕಿ ಬಾತ್ ಮನಸ್ಸಿನ ಮಾತಾಗಿದೆ-ಸಿಎಂ ಬಸವರಾಜ ಬೊಮ್ಮಾಯಿ: ಪ್ರಧಾನಮಂತ್ರಿ ಮನ್ ಕಿ ಬಾತ್ ಮನಸ್ಸಿನ ಮಾತಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ನೀರಲಗಿ ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ವೀಕ್ಷಣೆ ಬಳಿಕ ಅವರು ಮಾತನಾಡಿದ್ದಾರೆ.
ನರೇಂದ್ರ ಮೋದಿ ಮನ್ ಕಿ ಬಾತ್ ಕಾರ್ಯಕ್ರಮವನ್ನು ದೇಶಾದ್ಯಂತ ಕೋಟ್ಯಾಂತರ ಜನ ವೀಕ್ಷಣೆ ಮಾಡಿದ್ದಾರೆ. ಕರ್ನಾಟಕದ ಪ್ರತಿ ಗ್ರಾಮದಲ್ಲಿ ಪ್ರತಿ ಮನೆಯಲ್ಲಿ ಮನ್ ಕಿ ಬಾತ್ ವೀಕ್ಷಣೆ ಮಾಡಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು. ಮನ್ ಕಿ ಬಾತ್ನಲ್ಲಿ ಜನರ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹಾರ ಕಂಡುಕೊಳ್ಳಲು ಸಾಧ್ಯ ಇದೆ ಎಂದು ಬೊಮ್ಮಾಯಿ ತಿಳಿಸಿದರು. ಸಣ್ಣ ಸಣ್ಣ ಗ್ರಾಮದಲ್ಲಿ ಚಿಕ್ಕ ಚಿಕ್ಕ ಉದ್ಯಮಿದಾರರು ಆರಂಭಿಸಿರುವ ಉದ್ಯಮಗಳ ಬಗ್ಗೆ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ದೇಶಕ್ಕೆ ಪರಿಚಯಿಸುವ ಕೆಲಸ ಮನ್ ಕಿ ಬಾತ್ನಿಂದ ಆಗುತ್ತಿದೆ.
ಮನ್ ಕಿ ಬಾತ್ ಇದರಿಂದ ಅನೇಕರು ತಮ್ಮ ಉದ್ಯೋಗ ಬದಲಾಯಿಸಿ ಸ್ವಯಂ ಉದ್ಯೋಗ ಕಂಡುಕೊಂಡಿದ್ದಾರೆ. ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದ್ದು, ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಷ್ಟು ದೊಡ್ಡ ವೇದಿಕೆ ಸಿಕ್ಕಾಗ ಇಡೀ ದೇಶಕ್ಕೆ ಸ್ಪೂರ್ತಿಯಾಗುತ್ತದೆ. ಸರ್ವರಿಗೂ ಸರ್ವ ವ್ಯಾಪಿಯಾಗಿ ಅಭಿಪ್ರಾಯ ಹಂಚಿಕೊಳ್ಳುವ ವೇದಿಕೆ ಇದಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
ಮೋದಿಯವರು ಮಹಾನ್ ನಾಯಕರಾಗಿದ್ದಾರೆ. ಅವರಿಗೆ 100 ನೇ ಸಂಚಿಕೆ ನಡೆಸಿಕೊಟ್ಟಿರುವುದಕ್ಕೆ ಅಭಿನಂದನೆ ಸಲ್ಲಿಸುವದಾಗಿ ಬೊಮ್ಮಾಯಿ ತಿಳಿಸಿದರು. ಮೇ 7 ರಂದು ಪ್ರಧಾನಿ ನರೇಂದ್ರ ಮೋದಿ ಹಾವೇರಿಗೆ ಆಗಮಿಸಲಿದ್ದಾರೆ. ಇದರಿಂದ ನಮ್ಮ ಹಾವೇರಿ ಬಿಜಿಪಿಗೆ ಮತ್ತಷ್ಟು ಶಕ್ತಿ ಬರಲಿದೆ ಎಂದು ಬೊಮ್ಮಾಯಿ ಎಂದರು. ಹಾವೇರಿ ಜಿಲ್ಲೆಯ ಸುತ್ತಮುತ್ತಲಿನ ತಾಲೂಕಿನ 10 ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಆಗಮಿಸುತ್ತಾರೆ.
ಕಿಚ್ಚ ಸುದೀಪ್ ವೈಯುಕ್ತಿಕ ಕಾರಣಗಳಿಂದ ಎರಡು ದಿನ ಪ್ರಚಾರಕ್ಕೆ ಬಂದಿಲ್ಲ. ನಾಳೆಯಿಂದ ನಮ್ಮ ಅಭ್ಯರ್ಥಿ ಪರ ಸುದೀಪ್ ಪ್ರಚಾರ ಮಾಡುತ್ತಾರೆ ಎಂದು ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: ನನ್ನನ್ನೂ ಸೇರಿ 50 ಮುಖಂಡರ ಮೇಲೆ ಲೋಕಾಯುಕ್ತ ದಾಳಿಗೆ ಸಂಚು: ಲಕ್ಷ್ಮೀ ಹೆಬ್ಬಾಳ್ಕರ್ ಗಂಭೀರ ಆರೋಪ