ಹಾವೇರಿ: ಹಾವೇರಿ ಜಿಲ್ಲಾ ಸಹಕಾರಿ ಒಕ್ಕೂಟವು ಅಷ್ಟು ಸುಲಭವಾಗಿ ಸಿಕ್ಕಿಲ್ಲ. ಇದಕ್ಕೆ ನಾವೆಲ್ಲರೂ ದೊಡ್ಡ ಹೋರಾಟ ಮಾಡಿದ್ದೇವೆ. ಹಾಲು ಉತ್ಪಾದನೆ ಮಾಡುವ ರೈತರಿಗೆ ಅಭಿನಂದನೆ. ಹಾಲು ಉತ್ಪಾದಿಸಿ ಪ್ರಭಾವ ಬೀರುವ ಮೂಲಕ ಒಕ್ಕೂಟ ಪಡೆದುಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ. ರೈತರಿಗೆ ಹೆಚ್ಚಿನ ಲಾಭ ಒದಗಿಸಲು ಈ ಒಕ್ಕೂಟ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಬ್ಯಾಡಗಿ ತಾಲೂಕಿನ ಅರಬಗೊಂಡ ಗ್ರಾಮದ ಬಳಿ ಮೆಗಾ ಡೈರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಸಿಎಂ, ನಮ್ಮ ಸರ್ಕಾರದಿಂದ ಮೆಗಾ ಡೈರಿಗೆ ಅನುಮೋದನೆ ನೀಡಿ ಅಡಿಗಲ್ಲು ಹಾಕಿದ್ದೇವೆ. ಅದಕ್ಕೆಲ್ಲ ರೈತ ಬಂಧುಗಳ ಆಶೀರ್ವಾದವೇ ಕಾರಣವಾಗಿದೆ. ರೈತರ ಆದಾಯ ದುಪ್ಪಟ್ಟು ಆಗಬೇಕು ಎಂಬ ದೂರದೃಷ್ಟಿ ಹೊಂದಿರುವ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ಕನಸು ಇದಾಗಿದೆ. ಕಿಸಾನ್ ಸಮ್ಮಾನ ಯೋಜನೆಗೆ ಕೇಂದ್ರದ ಜೊತೆಗೆ ರಾಜ್ಯ ಸರ್ಕಾರವೂ ಹಣ ನೀಡುತ್ತಿದೆ ಎಂದರು.
ರೈತ ವಿದ್ಯಾನಿಧಿ ಯೋಜನೆ: ಯುವಕರಿಗೆ ಕೆಲಸ ಕೊಡುವ ನಿಟ್ಟಿನಲ್ಲಿ ಔದ್ಯೋಗೀಕರಣ ಬಹಳ ಮುಖ್ಯ. ಎಲ್ಲ ರಂಗದಲ್ಲೂ ಹಾವೇರಿ ಮುಂದೆ ಬರಬೇಕು ಎಂಬ ಇಚ್ಛೆ ನನ್ನದು. ಹದಿನಾಲ್ಕು ಲಕ್ಷ ಜನರಿಗೆ ರೈತ ವಿದ್ಯಾನಿಧಿ ಯೋಜನೆ ಸಿಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ 28 ಸಾವಿರ ಜನರಿಗೆ ರೈತ ವಿದ್ಯಾನಿಧಿ ಯೋಜನೆ ಲಾಭ ಸಿಗುತ್ತಿದೆ. ಕೇಂದ್ರ ಸರ್ಕಾರಕ್ಕಿಂತ ಎರಡು ಪಟ್ಟು ರೈತರಿಗೆ ಕೊಡಬೇಕು ಅನ್ನೋ ವಿಚಾರ ಮಾಡಿದ್ದೆವು. ನೀರಾವರಿ, ತೋಟಗಾರಿಕೆ ಹೀಗೆ ರೈತರ ಸಂಕಷ್ಟಕ್ಕೆ ಧಾವಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಬೋರ್ವೆಲ್ ಕೊರೆಸುವುದಕ್ಕೂ ಮಧ್ಯವರ್ತಿ: ನಾವು ದೇಶದಲ್ಲೇ ಮೊದಲ ಬಾರಿಗೆ ಕ್ಷೀರ ಬ್ಯಾಂಕ್ ಮಾಡಬೇಕು ಎಂಬ ವಿಚಾರದಲ್ಲಿದ್ದೇವೆ. ಅದು ಆರ್ಬಿಐ ಹಂತದಲ್ಲಿದೆ. ಆದಷ್ಟು ಬೇಗ ಹಾಲು ಉತ್ಪಾದಕರಿಗೆ, ಹಾಲು ಉತ್ಪಾದನೆ ಅನುಕೂಲಕ್ಕೆ ಬೇಕಾದ ಬ್ಯಾಂಕ್ ಆರಂಭ ಮಾಡುತ್ತಿದ್ದೇವೆ. ಹಿಂದಿನ ಸರ್ಕಾರದಲ್ಲಿ ಬೋರ್ವೆಲ್ ಕೊರೆಸುವುದಕ್ಕೂ ಮಧ್ಯವರ್ತಿಗಳಿದ್ದರು. ನಾವು ನೇರವಾಗಿ ರೈತರ ಖಾತೆಗೆ ಹಣ ನೀಡುವ ವ್ಯವಸ್ಥೆ ಮಾಡಿದ್ದೇವೆ. ಬೆಂಗಳೂರಿಗೆ ಹೋದ ತಕ್ಷಣ ಹೆಚ್ಚಿನ ವಿದ್ಯುತ್ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಗಂಟು ರೋಗದಿಂದ ತೀರಿಕೊಂಡ ಆಕಳುಗಳಿಗೆ 20 ಸಾವಿರ ರೂಪಾಯಿ ಪರಿಹಾರ ನೀಡುವ ತೀರ್ಮಾನ ಮಾಡಿದ್ದೇವೆ. ಮೃತಪಟ್ಟ ಎತ್ತುಗಳಿಗೆ 30 ಸಾವಿರ ಕೊಡುತ್ತೇವೆ. ಗಂಟು ರೋಗಕ್ಕೆ ತುತ್ತಾದ ಜಾನುವಾರುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಸಂಪೂರ್ಣವಾಗಿ ಭರಿಸಲಿದೆ ಎಂದು ಹೇಳಿದರು.
ಅದ್ಧೂರಿ ರಜತ ಮಹೋತ್ಸವ: ನಮ್ಮ ಹೊಲಸು ತೆಗೆಯುವ ಬಡ ಪೌರಕಾರ್ಮಿಕರ ಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಯಾರೂ ಮಾಡಿರಲಿಲ್ಲ. ಅದನ್ನು ನಾವು ಮಾಡಿದ್ದೇವೆ. ಹಾವೇರಿ ಜಿಲ್ಲೆಯಾಗಿ 25 ವರ್ಷ ಆಗಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜೊತೆಗೆ ರಜತ ಮಹೋತ್ಸವವನ್ನೂ ಹಾವೇರಿ ಜಿಲ್ಲೆಯಲ್ಲಿ ಅದ್ಧೂರಿಯಾಗಿ ಮಾಡುತ್ತೇವೆ. ಹಾಲು ಒಕ್ಕೂಟ ಬೇರೆ ಮಾಡುವ ಸಮಯದಲ್ಲಿ ಬಾಲಚಂದ್ರ ಜಾರಕಿಹೊಳಿಯವರು ನಮ್ಮ ಜೊತೆಗೆ ನಿಂತರು. ಮೆಗಾ ಡೈರಿ ಮಾಡುವಾಗಲೂ ನಮ್ಮ ಜೊತೆಗಿದ್ದರು. ಈ ಡೈರಿ ಬರಲು ಕೆಎಂಎಫ್ ಮತ್ತು ಪಶು ಸಂಗೋಪನೆ ಸಚಿವರು ಸಹಕಾರ ನೀಡಿದ್ದಾರೆ ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ: ಮೆಘಾ ಡೈರಿಗೆ ಸಿಎಂ ಶಂಕುಸ್ಥಾಪನೆ: ಪೂಜೆ ಸಲ್ಲಿಸಿ ಗೋವಿನ ಕರುಗೆ ಮುತ್ತಿಟ್ಟ ಬೊಮ್ಮಾಯಿ