ಹಾವೇರಿ: ಈ ಭಾಗದ ರೈತರ ಕಬ್ಬಿಗೆ ಒಳ್ಳೆಯ ದರ ಕೊಡು. ರೈತರಿಗೆ ಮೋಸ ಮಾಡಬೇಡ. ಬಾಹ್ಯ ಉತ್ಪಾದನೆಯ ಲಾಭವನ್ನು ಎಲ್ಲರಿಗೂ ಹಂಚು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್‌ಗೆ ಕಿವಿಮಾತು ಹೇಳಿದ್ದಾರೆ.
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಜಕ್ಕನಕಟ್ಟಿಯಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ಅವರ ಸಕ್ಕರೆ ಕಾರ್ಖಾನೆಯ ಕಬ್ಬು ಅರಿಯುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಇದೇ ವೇಳೆ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಮುರುಗೇಶ್ ನಿರಾಣಿ ನನಗೆ 15 ವರ್ಷದ ಹಿಂದೆಯೇ ಸಕ್ಕರೆ ಕಾರ್ಖಾನೆ ಸ್ಥಾಪಿಸು ಎಂದಿದ್ದರು ಎಂದು ತಿಳಿಸಿದರು.
ಅಷ್ಟೇ ಅಲ್ಲದೆ ನನ್ನ ಕಡೆ ಸಣ್ಣ ಮಿಶನ್ ಇದೆ. ತೆಗೆದುಕೊಂಡು ಕಾರ್ಖಾನೆ ಆರಂಭಿಸು ಎಂದಿದ್ದರು. ಅಷ್ಟೇ ಅಲ್ಲದೆ ಕೆಲ ವರ್ಷಗಳ ಹಿಂದೆ ಕಲಘಟಗಿಯಲ್ಲಿ ಕಾರ್ಖಾನೆ ಇದೆ. ತೆಗೆದುಕೊಳ್ಳಿ ಎಂದಿದ್ದರು. ಆದರೆ, ನಾನು ಬೇಡ ಎಂದಿದ್ದೆ ಎಂದು ತಿಳಿಸಿದರು. ಒಬ್ಬ ಒಬ್ಬರಿಗೆ ಒಂದೊಂದು ಚಾಕಚಕ್ಯತೆ ಇರುತ್ತೆ. ನನಗೆ ಸಕ್ಕರೆ ಕಾರ್ಖಾನೆಯಲ್ಲಿ ಚಾಕಚಕ್ಯತೆ ಇಲ್ಲ ಎಂದರು.
ಅಂದು ಸಕ್ಕರೆ ಕಾರ್ಖಾನೆ ಆರಂಭಿಸಿದ್ದ ಸಚಿವ ಮುರುಗೇಶ ನಿರಾಣಿ ಇದೀಗ 11 ಸಕ್ಕರೆ ಕಾರ್ಖಾನೆಗಳನ್ನು ನಡೆಸುತ್ತಿದ್ದಾರೆ. ರಾಜ್ಯವಲ್ಲದೆ ಬೇರೆ ರಾಜ್ಯಗಳ ಸಕ್ಕರೆ ಕಾರ್ಖಾನೆಗಳನ್ನು ನಡೆಸುತ್ತಿರುವ ನಿರಾಣಿ ದೇಶದ ಸಕ್ಕರೆ ಉತ್ಪಾದನೆ ಉದ್ಯಮದಲ್ಲಿ ಪ್ರಮುಖರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎನರ್ಜಿ ವೀಕ್ ಕಾರ್ಯಕ್ರಮ: ಮುಂದಿನ ತಿಂಗಳು ರಾಜ್ಯದಲ್ಲಿ ಎನರ್ಜಿ ವೀಕ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಎನರ್ಜಿ ಕಾರ್ಯಕ್ರಮಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಾರ್ಖಾನೆಗಳ ಸ್ಥಾಪನೆಗೆ ಮನವಿ: ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ. ಹಾವೇರಿ ಜಿಲ್ಲೆಯಲ್ಲಿ ಈಗಾಗಲೇ ಎರಡು ಸಕ್ಕರೆ ಕಾರ್ಖಾನೆಗಳಿವೆ. ಇದರ ನಡುವೆ ಇನ್ನೂ ಮೂರು ಕಾರ್ಖಾನೆಗಳ ಸ್ಥಾಪನೆಗೆ ಮನವಿ ಸಲ್ಲಿಸಲಾಗಿದೆ. ಎಲ್ಲ ಕಾರ್ಖಾನೆಗಳಿಗೆ ಅನುಮತಿ ನೀಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.
ಸರ್ಕಾರದ ಆದಾಯ ಹೆಚ್ಚಳ: ಸಕ್ಕರೆ ಕಾರ್ಖಾನೆಗಳಲ್ಲಿ ಉತ್ಪಾದಿಸುವ ಎಥೆನಾಲ್ ಪರಿಸರ ಪ್ರೇಮಿಯಾಗಿದೆ. ಮುಂದಿನ 50 ವರ್ಷಗಳಲ್ಲಿ ಈ ಜೈವಿಕ ಇಂಧನಕ್ಕೆ ಹೆಚ್ಚು ಬೇಡಿಕೆ ಬರಲಿದೆ. ಇದರ ಉತ್ಪಾದನೆಯಿಂದ ರೈತರ ಅಭ್ಯುದಯ ಮತ್ತು ಸರ್ಕಾರದ ಆದಾಯ ಸಹ ಹೆಚ್ಚಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಓದಿ: ಅಮೃತ ಕಾಲದ ಕನಸು ನನಸಾಗಿಸಲು 25 ವರ್ಷ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿದೆ: ಬೊಮ್ಮಾಯಿ