ಹಾವೇರಿ: ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಹಿರೇಕೆರೂರಿನಲ್ಲಿ 2 ಕೆರೆಗಳಿಗೆ ನೀರು ತುಂಬುವ ಯೋಜನೆಯನ್ನು ಉದ್ಘಾಟನೆ ಮಾಡಿದ್ದೇವೆ. ಇದರ ಜೊತೆಗೆ ಇನ್ನು ಅನೇಕ ಅಭಿವೃದ್ಧಿ ಯೋಜನೆ ಘೋಷಣೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಹಿರೇಕೆರೂರಿನ ಬಸರಿಕಟ್ಟಿ ಹೆಲಿಪ್ಯಾಡ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿರೇಕೆರೂರು, ರಟ್ಟೆಹಳ್ಳಿ ಹಾಗೂ ರಾಣೇಬೆನ್ನೂರಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಹಾವೇರಿಯಲ್ಲಿ ಮೆಗಾ ಡೈರಿ ಸಂಸ್ಕಾರಣ ಘಟಕಕ್ಕೆ ಅಡಿಗಲ್ಲು ಹಾಕಿದ್ದೇವೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೆರೆ ತುಂಬಿಸುವ ಯೋಜನೆಗಳನ್ನು ಮಾಡಲಿದ್ದೇವೆ ಎಂದರು.
ಅಕ್ಟೋಬರ್ 01ರಿಂದ ಹೊಸ ಶಿಕ್ಷಣ ನೀತಿ ಜಾರಿ:
ಉನ್ನತ ಶಿಕ್ಷಣದಲ್ಲಿ ಹೊಸ ಶಿಕ್ಷಣ ನೀತಿ ಜಾರಿ ಕುರಿತಂತೆ ಮಾತನಾಡಿ, ಕೆಲವೆ ತಿಂಗಳಲ್ಲಿ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುವುದು. ನೀತಿಯ ಬಗ್ಗೆ ಅಧ್ಯಯನ ಸಂಪೂರ್ಣವಾಗಿ ಅಧ್ಯಯನ ಮಾಡಲು ಸಮಿತಿಯನ್ನು ರಚನೆ ಮಾಡಿದ್ದೇವೆ. ನೀತಿಯನ್ನು ಜಾರಿಗೆ ತರಲು ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಈ ಸಮಿತಿಗಳ ವರದಿ ಆಧಾರದ ಮೇಲೆ ಅ.01 ರಿಂದ ಹೊಸ ಶಿಕ್ಷಣ ನೀತಿ ಆರಂಭವಾಲಿದೆ ಎಂದರು.
ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಲ್ಲ:
ಯಾರು ಯಾರು ಕೊಡುವ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ಪೊಲೀಸ್ ಇಲಾಖೆ ದಕ್ಷವಾಗಿ ಕೆಲಸ ಮಾಡುತ್ತಿದೆ. ಮೈಸೂರು ಅತ್ಯಾಚಾರ ಪ್ರಕರಣವನ್ನು ಆದಷ್ಟು ಬೇಗ ಬೇಧಿಸುವ ಮೂಲಕ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸುತ್ತೇವೆ ಎಂದರು.
ಮೇಕೆದಾಟು ಮತ್ತು ಮಹದಾಯಿ ಬಗ್ಗೆ ಬೇಗ ಕ್ರಮ :
ರಾಜ್ಯದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಹಲವು ನೀರಾವರಿ ಏತ ನೀರಾವರಿ ಯೋಜನೆಗಳನ್ನು ಪೂರ್ಣ ಮಾಡುತ್ತೇವೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ 524 ಏರಿಸುವ ದೆಹಲಿಯ ಕಾನೂನು ತಜ್ಞರ ಜೊತೆಗೆ ಚರ್ಚೆ ಮಾಡಿದ್ದೇನೆ. ಮೇಕೆದಾಟು ಮತ್ತು ಮಹದಾಯಿ ಯೋಜನೆ ಕುರಿತಂತೆ ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಂಡಿದೆ. ಆದಷ್ಟು ಬೇಗ ಕೈಗೆತ್ತಿಕೊಳ್ಳುತ್ತೇವೆ ಎಂದರು.
ತಜ್ಞರ ಜೊತೆ ಸಭೆ ಬಳಿಕ ತೀರ್ಮಾನ :
ಇದೇ .30ರಂದು ಗಣೇಶ ಚತುರ್ಥಿ ವಿಚಾರವಾಗಿ ತಜ್ಞರ ಜೊತೆ ಸಭೆ ನಡೆಸಲಿದ್ದೇವೆ. ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಓದಿ: ಮೈಸೂರು ಅತ್ಯಾಚಾರ ಪ್ರಕರಣ: ಬಂಧಿತರು ತಮಿಳುನಾಡಿನ ಕೂಲಿ ಕಾರ್ಮಿಕರು - ಡಿಜಿಪಿ ಸೂದ್