ಹಾವೇರಿ : ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದದ ಹಿಂದೆ ಕೆಲವು ಸಂಘಟನೆಗಳ ಕೈವಾಡ ಇರುವ ವಿಚಾರವಾಗಿ ಏಜೆನ್ಸಿಯವರು ಆ ಕೆಲಸವನ್ನು ನೋಡಿಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹಿರೇಬೆಂಡಿಗೇರಿಯಲ್ಲಿನ ಕೆರೆಗೆ ಬಾಗಿನ ಅರ್ಪಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲಾ ಕಡೆ ಶಾಂತಿ ನೆಲೆಸಬೇಕು. ಶಾಲಾ-ಕಾಲೇಜುಗಳಲ್ಲಿ ಶಾಂತಿ ನೆಲೆಸಬೇಕು. ಹೈಕೋರ್ಟ್ ಆಜ್ಞೆ ಪರಿಪೂರ್ಣವಾಗಿ ನಾವು ಜಾರಿ ಮಾಡಬೇಕು.
ಎಲ್ಲಾ ಮಕ್ಕಳು ಯಾವುದೇ ಬೇಧ-ಭಾವವಿಲ್ಲದೆ ಒಮ್ಮನಿಸ್ಸಿನಿಂದ ಮೊದಲಿನಂತೆ ವಿದ್ಯಾರ್ಜನೆ ಮಾಡಬೇಕು. ಇದು ನನ್ನ ಮೊದಲನೇ ಕರ್ತವ್ಯ. ಈ ಕೆಲಸವನ್ನು ಮಾಡುತ್ತೇನೆ ಎಂದರು.
ರಾಜ್ಯ ಬಜೆಟ್ ಕುರಿತಂತೆ ಮಾತನಾಡಿದ ಅವರು, ಬಜೆಟ್ ಪ್ರಕ್ರಿಯೆ ಆರಂಭ ಮಾಡಿದ್ದೇನೆ. ಎಲ್ಲಾ ಇಲಾಖೆಗಳ ಬೇಡಿಕೆ ಬಗ್ಗೆ ಚರ್ಚೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳ ಜೊತೆಗೆ ರಾಜ್ಯ ಸರ್ಕಾರದ ಯೋಜನೆಗಳನ್ನು ಜೋಡಿಸಬೇಕು.
ಸಮಗ್ರ ಕರ್ನಾಟಕದ ಸೇರಿದಂತೆ ಈ ಹಿಂದಿನ ಸಾಲಗಳನ್ನು ನಿಭಾಯಿಸಿಕೊಂಡು ಆರ್ಥಿಕ ಹಿಂಜರಿತ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗುತ್ತದೆ ಎಂದರು.
ನಾಡೋಜ ಡಾ.ಚನ್ನವೀರ ಕಣವಿಗೆ ರಾಷ್ಟ್ರಕವಿ ಗೌರವ ನೀಡುವ ಕುರಿತು ಪ್ರತಿಕ್ರಿಯಿಸಿ, ಕಣವಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಅಭಿಲಾಷೆ ವ್ಯಕ್ತಪಡಿಸಿದೆ. ಅದಕ್ಕೆ ಪೂರಕವಾಗಿ ಶಿಫಾರಸು ಮಾಡುತ್ತೇವೆ ಎಂದರು.
ಪ್ರತಿಪಕ್ಷನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಕೋವಿಡ್ ಇಲ್ಲದ ಸಮಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಅತೀ ಹೆಚ್ಚು ಸಾಲ ಮಾಡಿದ್ದು ಎಂದು ಆರೋಪಿಸಿದರು.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಲಾಭಾರ ನೆರವೇರಿಸಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ದಂಪತಿ