ಹಾವೇರಿ: ಶಿಗ್ಗಾವಿ ತಾಲೂಕಿನ ಕುನ್ನೂರು ಗ್ರಾಮ ಗಣಪತಿ ತಯಾರಿಕೆಗೆ ಹೆಸರುವಾಸಿ. ಇಲ್ಲಿ ಮೂಲತಃ ಚಿತ್ರಗಾರ ಕುಟುಂಬ ಶಿಶುನಾಳ ಶರೀಫರ ಆಶೀರ್ವಾದದಿಂದ ಗಣೇಶ ಮೂರ್ತಿಗಳನ್ನ ತಯಾರಿಸುತ್ತಾ ಬಂದಿದೆ. ಚಿತ್ರಗಾರ ಕುಟುಂಬದಿಂದ ಗಣೇಶ ವಿಗ್ರಹ ಮಾಡಲು ಕಲಿತ ಸುಮಾರು 25ಕ್ಕೂ ಅಧಿಕ ಕುಟುಂಬಗಳು ಇಲ್ಲಿ ಮೂರ್ತಿಯನ್ನು ತಯಾರಿಸುತ್ತವೆ. ಇಲ್ಲಿ ತಯಾರಾಗುವ ಗಣೇಶ ಮೂರ್ತಿಗಳ ವಿಶಿಷ್ಟತೆ ಅಂದರೆ ಬಣ್ಣ ಮತ್ತು ಸೊಂಡಿಲು.
ಚಿತ್ರಗಾರ ಕುಟುಂಬ ತಯಾರಿಸುವ ಗಣಪತಿ ವಿಗ್ರಹಗಳಿಗೆ ಸಖತ್ ಡಿಮ್ಯಾಂಡ್ ಇದೆ. ದೂರದ ಊರುಗಳಿಂದ ಆಗಮಿಸುವ ಭಕ್ತರು ತಿಂಗಳುಗಳ ಮೊದಲೇ ತಮ್ಮ ಇಚ್ಛೆಯ ಗಣಪತಿ ಮೂರ್ತಿ ಆಯ್ಕೆ ಮಾಡಿ ಹೋಗುತ್ತಾರೆ.
ಇನ್ನು ಕುನ್ನೂರು ಗ್ರಾಮದಲ್ಲಿನ ಚಿತ್ರಗಾರ ಕುಟುಂಬ ಗಣೇಶನ ಮೂರ್ತಿ ತಯಾರಿಕೆಯ ಕಾರ್ಯ ಮಾಡಿಕೊಂಡು ಬಂದಿತ್ತು. ಇದೀಗ ಇಲ್ಲಿಗೆ ಕೆಲಸಕ್ಕೆ ಬಂದ ಕಾರ್ಮಿಕರು ಸಹ ವಿಗ್ರಹ ತಯಾರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಗಣಪತಿ ವಿಗ್ರಹಗಳು ಇಲ್ಲಿ ತಯಾರಾಗುತ್ತವೆ. ಹಿಂದೂ - ಮುಸ್ಲಿಂ ಜಾತಿ ಬೇಧವಿಲ್ಲದೆ ಇಲ್ಲಿ ಗಣೇಶ ಮೂರ್ತಿಗಳನ್ನ ತಯಾರಿಸಲಾಗುತ್ತದೆ.
ಇಲ್ಲಿಯ ಕಲಾವಿದರು ಗಣೇಶ ವಿಗ್ರಹಕ್ಕೆ ರಾಸಾಯನಿಕ ಬಣ್ಣ ಹಚ್ಚುವುದಿಲ್ಲ. ಬದಲಿಗೆ ಪರಿಸರ ಸ್ನೇಹಿ ಬಣ್ಣ ಬಳಸುವ ಮೂಲಕ ಪರಿಸರ ಪ್ರೇಮ ಮೆರೆಯುತ್ತಾರೆ. ಕೊರೊನಾ ಹಿನ್ನೆಲೆಯಲ್ಲಿ ಇಲ್ಲಿಯ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದರು. ಸತತ ಎರಡು ವರ್ಷಗಳಿಂದ ಕಾಡುತ್ತಿರುವ ಕೊರೊನಾ ಈ ಕಲಾವಿದರಿಗೆ ನಿರಾಸೆಯನ್ನುಂಟು ಮಾಡಿದೆ. ಹೀಗಾಗಿ ಕೊರೊನಾ ಆದಷ್ಟು ಬೇಗ ವಿಶ್ವದಿಂದ ತೊಲಗಲಿ. ಜಗತ್ತು ಯಥಾಸ್ಥಿತಿಗೆ ಮರಳುವಂತಾಗಲಿ ಎಂದು ಕಲಾವಿದರು ಬೇಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಕೊಡಗಿನಲ್ಲಿ 'ನಿಫಾ' ಭೀತಿ: ಹೈ ಆಲರ್ಟ್ ಘೋಷಿಸಿದ ಜಿಲ್ಲಾಡಳಿತ