ಹಾನಗಲ್: ಲಾಕ್ಡೌನ್ ದೊಡ್ಡ ಉದ್ಯಮಗಳ ಬೆನ್ನು ಮುರಿದರೆ, ಸಣ್ಣ ಉದ್ಯಮಗಳ ಕುತ್ತಿಗೆಯನ್ನು ಹಿಸುಕಿದೆ. ದಿನಗೂಲಿ, ವ್ಯಾಪಾರ ನಂಬಿ ಬದುಕು ಕಟ್ಟಿಕೊಂಡವರನ್ನು ಹಸಿವಿನ ಕೂಪಕ್ಕೆ ತಳ್ಳಿದೆ.
ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ 50ಕ್ಕೂ ಹೆಚ್ಚು ಅಲೆಮಾರಿ ಜನಾಂಗದ (ದುರಮುರಗಿ) ಕುಟುಂಬಗಳು ವಾಸವಾಗಿವೆ. ಇವರ ಮೂಲ ಕಸಬು ಕೂದಲು, ಪಿನ್ನಿನಂತಹ ಸಾಮಾನುಗಳನ್ನ ಮಾರಾಟ ಮಾಡುವುದಾಗಿದೆ.
ಲಾಕ್ಡೌನ್ ಪರಿಣಾಮ ಮನೆಯಲ್ಲಿ ಇರಬೇಕಿದೆ. ಹೊರಗಡೆ ಬಂದರೆ ಪೊಲೀಸರು ಲಾಠಿ ಬೀಸುತ್ತಾರೆ. ಹಸಿವಿನಿಂದ ಮಕ್ಕಳು ಅಳುತ್ತಿವೆ. ಒಂದು ಹೊತ್ತಿನ ಊಟವನ್ನೂ ನೀಡಲಾಗುತ್ತಿಲ್ಲ. ಸರ್ಕಾರ ನೀಡಿದ ಅಕ್ಕಿ, ಬೇಳೆ ಖಾಲಿಯಾಗಿದೆ. ಹಸಿವಿನಿಂದಲೇ ಮಕ್ಕಳು ಅನಾರೋಗ್ಯ ತುತ್ತಾಗುತ್ತವೆ ಎಂದು ಇಲ್ಲಿನ ನಿವಾಸಿ ಕಸ್ತೂರಿ ಎಂಬುವವರು ತಮ್ಮ ನೋವು ಹೇಳಿದರು.
ಕೆಲವರು ರೇಷನ್ ಕಾರ್ಡ್ಗಳನ್ನ ಹೊಂದಿದ್ದಾರೆ. ಉಳಿದವರು ಭಿಕ್ಷೆ ಬೇಡಿ ತಿನ್ನಬೇಕಿದೆ. ಅದಕ್ಕೂ ಹೊರಗಡೆ ಹೋಗಲು ಆಗುತ್ತಿಲ್ಲ ಎಂದು ಮಹಿಳೆಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಲಾಕ್ಡೌನ್ ಹೀಗೆ ಮುಂದುವರೆದರೆ ನಾವೆಲ್ಲ ಹಸಿವಿನಿಂದಲೇ ಪ್ರಾಣ ಬಿಡಬೇಕಾಗುತ್ತದೆ. ಕೂಡಲೇ ಸರ್ಕಾರ ದಿನಸಿ ಜೊತೆಗೆ ಉದ್ಯೋಗಕ್ಕೆ ದಾರಿ ಮಾಡಿಕೊಡುವಂತೆ ಆಗ್ರಹಿಸಿದರು.