ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗೊಟಗೋಡಿಯಲ್ಲಿರುವ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ ಅವರನ್ನ ಸೈಬರ್ ಕಳ್ಳರು ವಂಚಿಸಿದ್ದಾರೆ. ಕುಲಪತಿ ಡಾ. ಟಿ.ಎಂ ಭಾಸ್ಕರ್ ಬ್ಯಾಂಕ್ ಅಕೌಂಟ್ನಿಂದ 60,098 ರೂಪಾಯಿಗಳನ್ನ ಸೈಬರ್ ಕಳ್ಳರು ದೋಚಿದ್ದಾರೆ. ಟ್ರೂ ಕಾಲರ್ನಲ್ಲಿ ಬ್ಯಾಂಕ್ ಎಂದಿದ್ದನ್ನ ನೋಡಿ ಕುಲಪತಿ ಭಾಸ್ಕರ್ ಪೋನ್ ಕಾಲ್ ರಿಸೀವ್ ಮಾಡಿದ್ದಾರೆ. ಧಾರವಾಡ ಎಸ್ಬಿಐ ಬ್ಯಾಂಕ್ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದ ನವೀನ ಕುಮಾರ ಎಂಬಾತ ಕುಲಪತಿಗೆ ವಂಚಿಸಿದ್ದಾನೆ. ಫೋನ್ ಪೇ ದಿನದ ಟ್ರಾಂಜಕ್ಸನ್ 60 ಸಾವಿರ ರೂ. ಇದ್ದು ಇದನ್ನು ಮುಂದುವರಿಸಲು ನಾವು ಕಳುಹಿಸಿರುವ ಲಿಂಕ್ ಒತ್ತಿ ಎಂದು ವಂಚಕ ನಂಬಿಸಿದ್ದಾನೆ.
ಲಿಂಕ್ ಓಪನ್ ಮಾಡುತ್ತಿದ್ದಂತೆ 60 ಸಾವಿರ ರೂಪಾಯಿ ಹಣ ಡೆಬಿಟ್ ಆಗಿದೆ ಎಂದು ಮೆಸೇಜ್ ಬಂದಿದೆ. ನಂತರ ಭಾಸ್ಕರ್ ಅವರು ಕರೆ ಮಾಡಿದಾಗ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ವಂಚನೆಯಾಗಿರುವುದು ಖಚಿತವಾದ ನಂತರ ಭಾಸ್ಕರ್ ಈ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಕಲಿ ಆ್ಯಪ್ ಮೂಲಕ ಶಿಕ್ಷಕಿಗೆ ಹಣ ವಂಚನೆ - ಆರೋಪಿ ಬಂಧನ( ಬೆಳ್ತಂಗಡಿ): ಇತ್ತೀಚೆಗೆ ಟೆಲಿಗ್ರಾಂ ಆ್ಯಪ್ನ ನಕಲಿ ಖಾತೆಯ ಮೂಲಕ ಸಂದೇಶ ಕಳುಹಿಸಿ ಒಂದು ಲಕ್ಷ ನಗದು ವಸೂಲಿ ಮಾಡಿದ್ದ ಆರೋಪಿಯನ್ನ ವೇಣೂರು ಪೊಲೀಸರು ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ಅಂಟ್ರಿಂಜ ನಿವಾಸಿ ಅಶ್ವತ್ ಹೆಬ್ಬಾರ್ (23) ಪ್ರಕರಣದ ಆರೋಪಿಯಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ನಿವಾಸಿ, ಪೆರೋಡಿತ್ತಾಯಕಟ್ಟೆ ಶಾಲೆಯ ಶಿಕ್ಷಕಿ ಜ್ಯೋತಿ ಅವರಿಗೆ ನಕಲಿ ಟೆಲಿಗ್ರಾಂ ಖಾತೆಯ ಮೂಲಕ ರೂ. ಮೂರು ಲಕ್ಷ ಕೊಡುವಂತೆ ಬೇಡಿಕೆ ಇಟ್ಟು, ಹಣ ನೀಡದೇ ಇದ್ದರೆ ಗಂಡನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದ. ಈ ಬಗ್ಗೆ ಜ್ಯೋತಿ ಅವರು ವೇಣೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ಕಾರ್ಯಾಚರಣೆಗಿಳಿದ ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸೌಮ್ಯ ಜೆ., ಆನಂದ ಎಂ. ಅವರ ತಂಡ ಆಗಸ್ಟ್ 2ರ ಮಧ್ಯರಾತ್ರಿ ತೆಂಕಕಾರಂದೂರು ಗ್ರಾಮದ ಗುಂಡೇರಿ ಎಂಬಲ್ಲಿಂದ ಬಂಧಿಸಿದ್ದರು.
ಇದನ್ನೂ ಓದಿ: ಬೆಳ್ತಂಗಡಿ: ನಕಲಿ ಆ್ಯಪ್ ಮೂಲಕ ಶಿಕ್ಷಕಿಗೆ ಹಣ ವಂಚನೆ.. ಆರೋಪಿ ಬಂಧನ
ವಿದ್ಯುತ್ ಬಿಲ್ ಹೆಸರಲ್ಲಿ ವಂಚನೆ( ಬೆಂಗಳೂರು): ವಿದ್ಯುತ್ ಬಿಲ್ ಹೆಸರಲ್ಲಿ ವ್ಯಕ್ತಿಯೊಬ್ಬರಿಗೆ 2 ಲಕ್ಷ ರೂ ವಂಚನೆ ಮಾಡಿದ್ದ ಪ್ರಕರಣ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿತ್ತು. ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಅನಾಮಧೇಯ ವ್ಯಕ್ತಿಯೊಬ್ಬರು ವಿಠಲ್ ಮಲ್ಯ ರಸ್ತೆಯ ನಿವಾಸಿಯೊಬ್ಬರಿಗೆ ಬೆಸ್ಕಾಂ ಸಿಬ್ಬಂದಿ ಹೆಸರಲ್ಲಿ ಕರೆ ಮಾಡಿ ಬಿಲ್ ಕಳಿಸಿ, ಬಿಲ್ ಪಾವತಿಸಿ, ಇಲ್ಲವಾದಲ್ಲಿ ವಿದ್ಯುತ್ ಕಡಿತಗೊಳಿಸುತ್ತೇವೆ ಎಂದು ಲಿಂಕ್ ಒಂದನ್ನು ಕಳುಹಿಸಿ, 10 ರೂ ಕಳುಹಿಸುವಂತೆ ಹೇಳಿದ್ದನು. ಅದರಂತೆ 10 ರೂ ಕಳುಹಿಸಿದ್ದ ತಕ್ಷಣ ಖಾತೆಯಲ್ಲಿದ್ದ 2 ಲಕ್ಷ ರೂ ಹಣ ಮಂಗಮಾಯವಾಗಿತ್ತು. ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದನ್ನೂ ಓದಿ: Bengaluru crime: ವಿದ್ಯುತ್ ಬಿಲ್ ಹೆಸರಿನಲ್ಲಿ 2 ಲಕ್ಷ ರೂ. ವಂಚನೆ.. ಪ್ರಕರಣ ದಾಖಲು