ಹಾವೇರಿ: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಅಕಾಲಿಕ ಮಳೆ ಮತ್ತಷ್ಟು ಹಾನಿ ತಂದಿದೆ. ಪ್ರತಿವರ್ಷ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಮೆಣಸಿನಕಾಯಿ ಚೀಲಗಳಿಂದ ತುಂಬಿರುತ್ತಿದ್ದ ಮಾರುಕಟ್ಟೆ ಇದೀಗ ಖಾಲಿ ಖಾಲಿಯಾಗಿದೆ.
ಅಕಾಲಿಕ ಮಳೆಯಿಂದ ಮಾರುಕಟ್ಟೆಗೆ ಕಡಿಮೆ ಸಂಖ್ಯೆಯಲ್ಲಿ ಮೆಣಸಿನಕಾಯಿ ಚೀಲಗಳು ಮಾರಾಟಕ್ಕೆ ಬಂದಿವೆ. ಅಕಾಲಿಕ ಮಳೆಯಿಂದ ಕಡಿಮೆ ಮಳೆಯಲ್ಲಿ ಬೆಳೆಯುತ್ತಿದ್ದ ಕೆಂಪು ಮೆಣಸಿನಕಾಯಿ ಬೆಳೆ ಜಮೀನಿನಲ್ಲೇ ಹಾಳಾಗಿದೆ. ಅಳಿದುಳಿದ ಮೆಣಸಿನಕಾಯಿಗೂ ಫಂಗಸ್ ಆವರಿಸಿದೆ.
ಪ್ರತಿವರ್ಷ ಮಾರುಕಟ್ಟೆಗೆ ನವಂಬರ್ ತಿಂಗಳಲ್ಲಿ ಒಂದು ಲಕ್ಷ ಚೀಲಕ್ಕೂ ಅಧಿಕ ಸಂಖ್ಯೆಯಲ್ಲಿ ಮೆಣಸಿನಕಾಯಿ ಬರುತ್ತಿತ್ತು. ಆದರೆ ಈ ವರ್ಷ ಕೇವಲ 25 ಸಾವಿರದಷ್ಟ ಮೆಣಸಿನಕಾಯಿ ಚೀಲಗಳು ಮಾರುಕಟ್ಟೆಗೆ ಬಂದಿವೆ. ಕ್ವಿಂಟಾಲ್ಗೆ ಸುಮಾರು 5 ಸಾವಿರದಿಂದ 25 ಸಾವಿರ ರೂಪಾಯಿ ಸರಾಸರಿ ದರದಲ್ಲಿ ಮಾರಾಟವಾಗುತ್ತಿದ್ದ ಮೆಣಸಿನಕಾಯಿ ಈಗ 800 ರೂ.ಗಳಿಂದ 2500 ರೂಪಾಯಿವರೆಗೆ ಮಾರಾಟವಾಗುತ್ತಿದೆ.
ಇಡೀ ಮಾರುಕಟ್ಟೆಗೆ ಬಂದ ಮೆಣಸಿನಕಾಯಿಯಲ್ಲಿ ಅತ್ಯುತ್ತಮ ಗುಣಮಟ್ಟದ ಮೆಣಸಿಕಾಯಿ ಶೇಕಡಾ 5ರಷ್ಟೂ ಸಿಗುತ್ತಿಲ್ಲ. ಈಗ ಬಂದ ಮೆಣಸಿನಕಾಯಿಯಲ್ಲಿ ಫಂಗಸ್ ಅಧಿಕವಾಗಿದ್ದು, ಅದರಿಂದ ಖಾರದ ಪುಡಿ ಸಹ ತಯಾರಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ವರ್ತಕರು.
ಅಕಾಲಿಕ ಮಳೆ ಮೆಣಸಿನಕಾಯಿ ಬೆಳೆದ ರೈತರಿಗಲ್ಲದೆ ದಲ್ಲಾಳಿಗಳಿಗೆ, ಕೂಲಿಕಾರ್ಮಿಕರಿಗೆ ಮತ್ತು ಖರೀದಿದಾರರು ಸೇರಿದಂತೆ ಮಾರುಕಟ್ಟೆಯನ್ನೇ ಅವಲಂಬಿಸಿದ ಜೀವಗಳೂ ಸಂಕಷ್ಟಕ್ಕೆ ಸಿಲುಕಿವೆ. ಈ ರೀತಿ ಮಳೆಯನ್ನು ನನ್ನ ಅನುಭವದಲ್ಲಿ ನೋಡಿಲ್ಲ. ಮೆಣಸಿನಕಾಯಿ ಬೆಳೆದು ನಷ್ಟ ಅನುಭವಿಸಿದ ರೈತರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಧಾವಿಸಬೇಕೆಂದು ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಅಕಾಲಿಕ ಮಳೆಯಿಂದ ಕೊಳೆತ ವೀಳ್ಯದೆಲೆ ಬಳ್ಳಿ.. ಆತಂಕದಲ್ಲಿ ಹಾವೇರಿ ಅನ್ನದಾತರು