ಹಾವೇರಿ : ಯುವಕನೋರ್ವ ಅನುಮಾನಸ್ಪದ ರೀತಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಗುಡ್ಡದಮಾದಾಪುರ ಗುಡ್ಡದಲ್ಲಿ ನಡೆದಿದೆ. ಮೃತ ಯುವಕನನ್ನ ರಟ್ಟಿಹಳ್ಳಿ ತಾಲೂಕಿನ ಗಂಗಾಯಿಕೊಪ್ಪದ (22) ಪ್ರವೀಣ ಎಂದು ಗುರುತಿಸಲಾಗಿದೆ. ಪ್ರವೀಣ ಕೆಲ ದಿನಗಳಿಂದ ಅಪ್ರಾಪ್ತೆಯೋರ್ವಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.
ಅಪ್ರಾಪ್ತೆಯ ಸಂಬಂಧಿಕರು ಪ್ರವೀಣ ಕುಟುಂಬದವರಿಂದ 20 ಲಕ್ಷ ರೂ. ಸಾಲ ಪಡೆದಿದ್ದರು ಎನ್ನಲಾಗಿದೆ. ಈ ಕುರಿತಂತೆ ಹಣ ಕೇಳಲಾರಂಭಿಸಿದಾಗ ಪ್ರವೀಣ ಜೊತೆ ಅಪ್ರಾಪ್ತೆಯನ್ನು ಬಿಟ್ಟು ಪ್ರೀತಿ ಪ್ರೇಮ ನಾಟಕವಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ ಈ ಕುರಿತಂತೆ ಪ್ರವೀಣ ವಿರುದ್ಧ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದರಂತೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರವೀಣ ಹುಡುಕಾಟದಲ್ಲಿದ್ದಾಗ ಪ್ರವೀಣ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅವನು ಆತ್ಮಹತ್ಯೆ ಮಾಡಿಕೊಂಡಿಲ್ಲ, ಬದಲಿಗೆ ಅಪ್ರಾಪ್ತೆಯ ಸಂಬಂಧಿಕರೇ ಆತನ ಕೊಲೆ ಮಾಡಿದ್ದಾರೆ ಎಂದು ಪ್ರವೀಣ ಸಂಬಂಧಿಕರು ಆರೋಪಿಸಿದ್ದಾರೆ. ಪ್ರವೀಣನನ್ನ ಕೊಲೆ ಮಾಡಿ ನಂತರ ನೇಣು ಬಿಗಿದಿದ್ದಾರೆ. ಆರೋಪಿಗಳ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪ್ರವೀಣ ಶವ ಪತ್ತೆಯಾಗುತ್ತಿದ್ದಂತೆ ಹಾವೇರಿ ಎಸ್ಪಿ ಹನುಮಂತರಾಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.