ವಿಜಯನಗರ/ಹಾವೇರಿ : ರಾಜ್ಯದ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿರುವ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ. ಎಲ್ಲ ಜಾತ್ರೆಗಳಲ್ಲಿ ರಥೋತ್ಸವ ನಡೆದರೆ, ಈ ಜಾತ್ರೆಯಲ್ಲಿ ಗೊರವಪ್ಪ ಕಾರ್ಣಿಕ ನುಡಿಯುವುದು ಪ್ರಮುಖವಾಗಿದೆ. ಭರತ ಹುಣ್ಣಿಮೆ ಎರಡನೇ ದಿನ ಇಲ್ಲಿ ಕಾರ್ಣಿಕೋತ್ಸವ ನಡೆಯುತ್ತೆ. ಈ ಕಾರ್ಣಿಕವನ್ನ ಪ್ರಸ್ತುತ ವರ್ಷದ ಭವಿಷ್ಯವಾಣಿ ಎಂತಲೇ ನಂಬಲಾಗುತ್ತದೆ.
ಪ್ರಸ್ತುತ ವರ್ಷ ಗೊರವಪ್ಪ ರಾಮಣ್ಣ 20 ಅಡಿ ಬಿಲ್ಲನೇರಿ ಕಾರ್ಣಿಕ ನುಡಿದ. ಗೊರವಪ್ಪ ರಾಮಣ್ಣ ಸದ್ದಲೇ ಎನ್ನುತ್ತಿದ್ದಂತೆ ಸೇರಿದ್ದ ಲಕ್ಷಾಂತರ ಜನ ನಿಶ್ಯಭ್ದಕ್ಕೆ ಜಾರಿತು. 20 ಅಡಿ ಬಿಲ್ಲನೇರಿದ ಗೊರವಪ್ಪ ಮುತ್ತಿನ ರಾಶಿ ಮೂರು ಪಾಲಾತಲೇ ಪರಾಕ್ ಎಂದು ನುಡಿದು ಮೇಲಿನಿಂದ ಧುಮುಕಿದ್ದಾರೆ. ಗೊರವಪ್ಪ ಕಾರ್ಣಿಕ ನುಡಿಯುತ್ತಿದ್ದಂತೆ ಕ್ಷೇತ್ರದ ಧರ್ಮದರ್ಶಿಗಳು ಮತ್ತು ರಾಜಕಾರಣಿಗಳು ತಮ್ಮದೇ ಆದ ವಿಶ್ಲೇಷಣೆ ಮಾಡುವುದು ವಾಡಿಕೆ. ಪ್ರಸ್ತುತ ವರ್ಷ ಗೊರವಪ್ಪ ಮುತ್ತಿನರಾಶಿ ಮೂರು ಪಾಲಾತಲೇ ಪರಾಕ್ ಎಂದಿದ್ದಾನೆ. ಇದರ ಅರ್ಥ ದೇಶದ ಮೂರು ಕಡೆ ಸುಭೀಕ್ಷೆ ಆವರಿಸುತ್ತದೆ. ಒಂದು ಕಡೆ ಮಳೆ ಬೆಳೆ ಕೊರತೆಯಾಗುತ್ತದೆ ಎಂದು ಧರ್ಮದರ್ಶಿಗಳು ಕಾರ್ಣಿಕವನ್ನ ವಿಶ್ಲೇಷಣೆ ಮಾಡಿದರು.
ಓದಿ:‘ಮಳೆ, ಬೆಳೆ ಸಂಪಾತಲೇ ಪರಾಕ್’... ಕಾರ್ಣಿಕ ನುಡಿದ ಆಡೂರು ಗೊರವಯ್ಯ
ಕಾರ್ಣಿಕಕ್ಕೆ ಹಲವು ರಾಜಕಾರಣಿಗಳು ಸಹ ಸಾಕ್ಷಿಯಾಗಿದ್ದರು. ಅವರು ಕಾರ್ಣಿಕವನ್ನ ತಮ್ಮ ರಾಜಕೀಯ ಅನ್ವಯಿಸುವುದು ವಾಡಿದೆ. ಪ್ರಸ್ತುತ ಕಾರ್ಣಿಕದಲ್ಲಿ ಮಾಜಿ ಸಚಿವರಾದ ಪರಮೇಶ್ವರ ನಾಯಕ್ ಮತ್ತು ಬಸವರಾಜ್ ಶಿವಣ್ಣನವರ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಪರಮೇಶ್ವರ ನಾಯಕ್ ಕಾರ್ಣಿಕ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ. ಗೊರವಪ್ಪ 11 ದಿನಗಳ ಕಾಲ ಉಪವಾಸ ವ್ರತ ಕೈಗೊಂಡಿರುತ್ತಾರೆ. 11 ದಿನಗಳ ಕಾಲ ಬಂಡಾರದ ನೀರು ಕುಡಿಯುವ ಗೊರವಪ್ಪ ಕಾರ್ಣಿಕ ನುಡಿದ ನಂತರ ಉಪವಾಸ ವ್ರತ ಪೂರ್ಣಗೊಳಿಸುತ್ತಾರೆ. ಕಾರ್ಣಿಕ ನುಡಿಯುವ ದಿನ ಸ್ವತಃ ಮೈಲಾರಲಿಂಗೇಶ್ವರನೇ ಗೊರವಪ್ಪನ ರೂಪದಲ್ಲಿ ವರ್ಷದ ಭವಿಷ್ಯವಾಣಿ ನುಡಿಯುತ್ತಾನೆ ಎಂಬ ನಂಬಿಕೆ ಇಲ್ಲಿ ಮನೆ ಮಾಡಿದೆ. ಈ ಕಾರ್ಣಿಕ ಕೇಳಲು ರಾಜ್ಯ ಸೇರಿದಂತೆ ಆಂಧ್ರಪ್ರದೇಶದಿಂದ ಭಕ್ತರು ಆಗಮಿಸಿದ್ದರು. ಕೊರೊನಾ ಕರಿನೆರಳಿನ ನಡುವೆ ಸಹ ಕಾರ್ಣಿಕ ಕೇಳಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಜಾತ್ರೆ ಹಿನ್ನೆಲೆ ಮೈಲಾರಲಿಂಗೇಶ್ವರನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.