ಹಾವೇರಿ/ರಾಣೆಬೆನ್ನೂರು: ರಾಣೆಬೆನ್ನೂರು ಕ್ಷೇತ್ರದ ವಿಧಾನಸಭಾ ಉಪ ಚುನಾವಣೆ ಕಾವು ಜೋರಾಗಿದೆ. ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಭಾರಿ ಪೈಪೋಟಿ ಶುರುವಾಗಿದೆ. ಟಿಕೆಟ್ಗಾಗಿ ಆಕಾಂಕ್ಷಿಗಳು ತೆರೆಮರೆಯಲ್ಲಿ ಪೈಪೋಟಿ ನಡೆಸುತ್ತಿದ್ದಾರೆ.
ರಾಣೆಬೆನ್ನೂರು ಕ್ಷೇತ್ರದಲ್ಲಿ ಈ ಹಿಂದೆ 2018 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಉಂಟಾಗಿ, ಹಲವು ರೀತಿ ಹೋರಾಟ - ಚೀರಾಟಗಳು ನಡೆದಿದ್ದವು. ಅಲ್ಲದೇ ಮೋದಿ ಹವಾದಲ್ಲಿ ಬಿಜೆಪಿ ಗೆಲ್ಲಬಹದು ಎಂಬ ಆಶಾವಾದದಿಂದಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹನುಮನ ಬಾಲದಂತಿತ್ತು. ಯಾರನ್ನೇ ಕೇಳಿದರು ಟಿಕೆಟ್ ನಮಗೆ ಎಂಬ ಮಾತುಗಳ ಕ್ಷೇತ್ರದಲ್ಲಿ ಬರುತ್ತಿದ್ದವು. ಈ ಎಲ್ಲ ತಿಕ್ಕಾಟ, ತಿಣಕಾಟಗಳನ್ನು ನೋಡಿದ ಬಿಜೆಪಿ ಹೈಕಮಾಂಡ್ ಹಿಂದುಳಿದ ಸಮುದಾಯದ ಡಾ.ಬಸವರಾಜ ಕೇಲಗಾರ ಅವರಿಗೆ ಮಣೆ ಹಾಕಿತ್ತು. ಇದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಮುಖಂಡರು ಚುನಾವಣೆ ಸಮಯದಲ್ಲಿ ಅವರ ವಿರುದ್ಧವೇ ಕೆಲಸ ಮಾಡಿದರು ಎಂಬ ಮಾತು ಸಹ ಕೇಳಿ ಬಂದಿತ್ತು. ಪರಿಣಾಮ ಬಿಜೆಪಿ ಅಭ್ಯರ್ಥಿ 50 ಸಾವಿರ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಡುವಂತಾದರು ಹಾಗೂ ಕೆಪಿಜೆಪಿಯ ಆರ್. ಶಂಕರ್ ಜಯಗಳಿಸಿದ್ದರು.
ಮತ್ತೆ ಟಿಕೆಟ್ಗಾಗಿ ಕಾದಾಟ:
ಈಗ ಶಾಸಕ ಆರ್. ಶಂಕರ್ ಅನರ್ಹಗೊಂಡಿದ್ದರಿಂದ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, ಬಿಜೆಪಿಗೆ ಮತ್ತದೇ ಹಳೆ ತಲೆನೋವು ಶುರುವಾಗಿದೆ. ಅನೇಕ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ವಾಟ್ಸ್ಆ್ಯಪ್ಗಳಲ್ಲಿ ನಾವೇ ಬಿಜೆಪಿ ಅಭ್ಯರ್ಥಿಗಳು ಎಂದು ಹೇಳಿಕೊಂಡು ಪೋಸ್ಟ್ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ಹೀಗಾಗಿ ಬಿಜೆಪಿಗೆ ಇದು ತಲೆನೋವಾಗಿ ಪರಿಣಮಿಸಿದೆ.
ಈಶ್ವರಪ್ಪ ಮಗನ ಎಂಟ್ರಿ:
ಈ ನಡುವೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ ಸಚಿವ ಕೆ.ಎಸ್.ಈಶ್ವರಪ್ಪನವರ ಮಗ ಜಿ.ಪಂ. ಸದಸ್ಯ ಕಾಂತೇಶ ಈಶ್ವರಪ್ಪ, ಕೂಡ ರಾಣೆಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಇದರ ಬಗ್ಗೆ ಈಗಾಗಲೇ ಫೇಸ್ಬುಕ್ನಲ್ಲಿ 'ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಂತೇಶಣ್ಣ' ಎಂಬ ಖಾತೆ ತೆರೆದು ಟ್ರೋಲ್ ಮಾಡಲಾಗುತ್ತಿದೆ. ಇದರ ಜತೆಗೆ 2013 ರ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ, 2018ರ ಅಭ್ಯರ್ಥಿ ಡಾ.ಬಸವರಾಜ ಕೇಲಗಾರ ಕೂಡ ಸಾಮಾಜಿಕ ಜಾಲತಾಣದಲ್ಲಿ ತಾವು ಟಿಕೆಟ್ ಆಕಾಂಕ್ಷಿಗಳು ಎಂದು ಸಾರುತ್ತಿದ್ದಾರೆ.