ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ವೀಳ್ಯದೆಲೆ ಬೆಳೆಯುವ ರೈತರು ಬೆಳೆ ನಾಶದಿಂದ ಕಂಗಾಲಾಗಿದ್ದಾರೆ. ಹೌದು ತಾಲೂಕಿನ 10ಕ್ಕೂ ಅಧಿಕ ಗ್ರಾಮಗಳಲ್ಲಿ ಅಕಾಲಿಕ ಮಳೆಯಿಂದ ಎಲೆಬಳ್ಳಿ ಕೊಳೆಯಲಾರಂಭಿಸಿದೆ.
ಸವಣೂರು ತಾಲೂಕಿನ ಕಾರಡಗಿ ಗ್ರಾಮ ಒಂದರಲ್ಲಿಯೇ ನೂರಾರು ಎಕರೆಯ ತೋಟದಲ್ಲಿ ಎಲೆಬಳ್ಳಿ ಕೊಳೆಯಲಾರಂಭಿಸಿದೆ. ಅಕಾಲಿಕ ಮಳೆ ಮತ್ತು ಸಮೀಪದಲ್ಲಿರುವ ಮಾದಾಪುರ ಕೆರೆಯಿಂದ ವೀಳ್ಯದೆಲೆ ಬಳ್ಳಿ ತೋಟಗಳಿಗೆ ನೀರು ನುಗ್ಗಿದೆ. ಐದಾರು ದಿನಗಳ ಕಾಲ ತೋಟದೊಳಗೆ ನೀರು ನಿಂತಿತ್ತು. ಪರಿಣಾಮ, ಎಲೆಬಳ್ಳಿಗಳು ಕೊಳೆತಿವೆ.
ಎಲೆಯ ಭೇರಿನಿಂದ ಕೊಳೆಯಲಾರಂಭಿಸಿದ್ದು, ಇನ್ನು ಕೆಲವು ದಿನಗಳಲ್ಲಿ ಇಡಿ ತೋಟಕ್ಕೆ ತೋಟವೇ ಕೊಳೆತು ಹೋಗಲಿದೆಯೆಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರತಿ ಎಕರೆಗೆ ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಿ ರೈತರು ವೀಳ್ಯದೆಲೆ ಬಳ್ಳಿ ತೋಟ ಮಾಡಿದ್ದಾರೆ. ಅದರಂತೆ ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಸಹ ಬರುತ್ತಿತ್ತು. ಒಂದು ಬಾರಿ ಬಳ್ಳಿ ಹಚ್ಚಿದರೆ 15 ವರ್ಷ ಎಲೆ ಬಳ್ಳಿಯಿಂದ ಆದಾಯ ಬರುತ್ತದೆ. ಆದರೆ ಎಲೆಬಳ್ಳಿ ಹಚ್ಚಿ ಎರಡು ವರ್ಷವಾಗಿಲ್ಲ. ಅಕಾಲಿಕ ಮಳೆ ಸಂಪೂರ್ಣ ಎಲೆಬಳ್ಳಿ ತೋಟವನ್ನೇ ಕೊಳೆಸಿದೆ.
ಮನೆಯ ಸದಸ್ಯರು ಸೇರಿದಂತೆ ಎಲೆಬಳ್ಳಿ ತೋಟದಲ್ಲಿ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇದೀಗ ಕುಟುಂಬಗಳಿಗೆ ಆದಾಯವಿಲ್ಲ ಜೊತೆಗೆ ಕಾರ್ಮಿಕರಿಗೆ ಕೆಲಸವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮತ್ತೆ ಈ ತೋಟಗಳಿಗೆ ಎಲೆಬಳ್ಳಿ ಹಚ್ಚಲು ಎರಡು ವರ್ಷ ಬೇಕು. ಈಗ ಇರುವ ಕೊಳೆತ ಎಲೆಬಳ್ಳಿಗಳನ್ನು ತೆಗೆದು ಭೂಮಿಯನ್ನು ಒಣಗಿಸಬೇಕು. ಎಲೆಬಳ್ಳಿ ಹಚ್ಚಿ ಎರಡು ವರ್ಷದ ನಂತರ ವೀಳ್ಯದೆಲೆ ಕೈಗೆ ಸಿಗುತ್ತದೆ. ಅಲ್ಲಿಯವರೆಗೆ ರೈತರು ಆದಾಯ ನಿರೀಕ್ಷಿಸುವಂತಿಲ್ಲ.
ಇದನ್ನೂ ಓದಿ: ಕುತ್ತಿಗೆಗೆ ವೈಯರ್ ಬಿಗಿದು ಅಪರಿಚಿತ ವ್ಯಕ್ತಿಯ ಕೊಲೆ
ಸವಣೂರಿನ ಎಲೆಗಳು ರಾಜ್ಯ, ಅಂತಾರಾಜ್ಯ ಅಷ್ಟೇ ಅಲ್ಲದೇ ಕರಾಚಿಗೆ ಸಹ ರಫ್ತಾಗುತ್ತಿದ್ದವು. ಆದರೆ, ಅಕಾಲಿಗೆ ಮಳೆ ಇದೀಗ ಎಲೆಬಳ್ಳಿ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇಷ್ಟಾದರೂ ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ಎಲೆಬಳ್ಳಿ ಬೆಳೆದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.