ಹಾವೇರಿ: ಚಿನ್ನದ ವ್ಯಾಪಾರಿಯ ಅಪಹರಣಕ್ಕೆ ಯತ್ನಿಸಿದ್ಧ ಐವರು ಆರೋಪಿಗಳನ್ನು ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ರಾಜು ಪವಾರ್, ಶೋಬಿತ ಪುಂಡಲಿಕರಾವ್, ಬೆಂಗಳೂರಿನ ಮಂಜುನಾಥ, ಜೇಮ್ಸ್, ಡುನಿಯಲ್, ಕೆ ಆರ್ ಪುರದ ಪ್ರಸನ್ನ ಬಂಧಿತ ಆರೋಪಿಗಳು. ಬಂಧಿತರು 21 ವರ್ಷದ ಗರ್ವಿತ ರಾಜಪುರೋಹಿತ ಎಂಬ ಚಿನ್ನದ ವ್ಯಾಪಾರಿಯನ್ನು ಅಪಹರಿಸಲು ಪ್ರಯತ್ನಿಸಿದ್ದರು. ರಟ್ಟಿಹಳ್ಳಿಯ ತರಳಬಾಳು ನಗರದ 1ನೇ ಕ್ರಾಸ್ ಬಳಿ ಘಟನೆ ನಡೆದಿತ್ತು.
ಕೃತ್ಯಕ್ಕೆ ಬಳಸಿದ ಕಾರ್ ಸೇರಿದಂತೆ 1 ಲಕ್ಷ 75 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ. ರಟ್ಟಿಹಳ್ಳಿ ಪಿಎಸ್ಐ ಜಗದೀಶ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಡಿಸೆಂಬರ್ 10 ರಂದು ಕಾರಿನಲ್ಲಿ ಬಂದ ಆರೋಪಿಗಳು, ಗರ್ವಿತ ಅವರ ಅಪಹರಣಕ್ಕೆ ಮುಂದಾಗಿದ್ದರು. ಅಪಹರಿಸಿ ಹಣಕ್ಕೆ ಬೇಡಿಕೆ ಇಡಲು ಯೋಜನೆ ರೂಪಿಸಿದ್ದರು. ಈ ಕುರಿತಂತೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಭೇದಿಸಿದ ತಂಡಕ್ಕೆ ಹಾವೇರಿ ಎಸ್ಪಿ ಅಂಶುಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಹಾಡಹಗಲೇ ಪಿಜಿಗಳಿಗೆ ನುಗ್ಗಿ ಲ್ಯಾಪ್ಟಾಪ್ ಕದಿಯುತ್ತಿದ್ದ ಮೂವರ ಬಂಧನ: 50ಕ್ಕೂ ಹೆಚ್ಚು ಲ್ಯಾಪ್ಟಾಪ್ ವಶ
ಮನೆಗೆ ಕನ್ನ ಹಾಕುತ್ತಿದ್ದ ಕಳ್ಳನನ್ನು ಹಡೆಮುರಿ ಕಟ್ಟಿದ ಸಾಗರ ಪೊಲೀಸರು: ಸಾಗರ ಗ್ರಾಮಾಂತರ ಹಾಗೂ ಆನಂದಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಕಳ್ಳತನ ಮಾಡುತ್ತಿದ್ದ ಕಳ್ಳನೊಬ್ಬನನ್ನು ಬಂಧಿಸಿ ಆತನನಿಂದ 5.70 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಹೈವೇಯಲ್ಲಿನ ಗ್ರಾಮಗಳ ಮನೆ ಸೇರಿದಂತೆ ಅಂಗಡಿಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ. ಕಳ್ಳನ ಕೈಚಳಕ ಕಂಡು ಜನತೆ ಬೇಸತ್ತಿದ್ದರು. ಮತ್ತೊಮ್ಮೆ ತನ್ನ ಬೇಟೆಗೆ ಹೊಂಚು ಹಾಕಿದ್ದ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಶಿವಮೊಗ್ಗದ ಟಿಪ್ಪು ನಗರದ ನಿವಾಸಿ ತೌಸಿಪ್ ಅಲಿಯಾಸ್ ಬಾಯಿಜಾನ್ ಎಂಬುವನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 5.70 ರೂ. ಬೆಲೆ ಬಾಳುವ ಸುಮಾರು 100 ಗ್ರಾಂ ತೂಕದ ಬಂಗಾರದ ಆಭರಣ ಮತ್ತು 62.400 ರೂ. ಬೆಲೆ ಬಾಳುವ ಸುಮಾರು 1 ಕೆಜಿ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ. ಒಟ್ಟು 8 ಸ್ವತ್ತು ಕಳವು ಪ್ರಕರಣಗಳನ್ನು ಪೊಲೀಸರು ಭೇದಿಸಿದಂತೆ ಆಗಿದೆ. ಕಳ್ಳನನ್ನು ಬಂಧಿಸಿದ ತಂಡಕ್ಕ ಜಿಲ್ಲಾ ಎಸ್ಪಿ ಮಿಥುನ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಬೆಂಗಳೂರು: ಹಾಡಹಗಲೇ ಪಿ.ಜಿ.ಗಳಿಗೆ ನುಗ್ಗಿ ಲ್ಯಾಪ್ಟಾಪ್ ಹಾಗೂ ಮೊಬೈಲ್ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಖದೀಮರನ್ನು ಬೆಂಗಳೂರಿನ ಯಶವಂತಪುರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆರೋಪಿಗಳಿಂದ 16 ಲಕ್ಷ ರೂಪಾಯಿಗೂ ಹೆಚ್ಚು ಬೆಲೆ ಬಾಳುವ 50ಕ್ಕೂ ಹೆಚ್ಚು ಲ್ಯಾಪ್ಟಾಪ್ ಹಾಗೂ 7 ಮೊಬೈಲ್ ಪೋನ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಂಧ್ರಪ್ರದೇಶದ ಚಿತ್ತೂರಿನ ವಿ. ಕೋಟಾದ ಯುವರಾಜ್, ಪ್ರಭು ಹಾಗೂ ತಮಿಳುನಾಡಿನ ಸೆಲ್ವರಾಜ್ ಬಂಧಿತ ಆರೋಪಿಗಳು. ಈ ಕಳ್ಳತನದಲ್ಲಿ ಭಾಗಿಯಾಗಿರುವ ಇನ್ನೂ ಮೂವರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಬಂಧಿತರೆಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.