ರಾಣೆಬೆನ್ನೂರು: ಸರ್ಕಾರದ ಸಕ್ಷಮ ಪ್ರಾಧಿಕಾರದ ಹುಲ್ಲುಗಾವಲು ಜಮೀನಿನಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಮನೆ ನಿರ್ಮಿಸಲು ಸಹಕಾರ ನೀಡಿದ ಆರೋಪದಡಿ ಪಂಚಾಯತಿ ಪಿಡಿಓಗಳು ಮತ್ತು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರ ಮೇಲೆ ಕೇಸ್ ದಾಖಲು ಮಾಡಲಾಗಿದೆ.
ರಾಣೆಬೆನ್ನೂರು ತಾಲೂಕಿನ ಬೇಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೆ ನಂ.52/ಅ ಸರ್ಕಾರಿ ಹುಲ್ಲುಗಾವಲು ಜಾಗದಲ್ಲಿ ಬೇಲೂರು ಗ್ರಾಮ ಪಂಚಾಯತ್ ಪಿಡಿಓಗಳು ಮತ್ತು ಅಧ್ಯಕ್ಷರು ಸೇರಿ ಅನಧಿಕೃತವಾಗಿ ವಿವಿಧ ವಸತಿಗಳನ್ನು ಕಲ್ಪಿಸಿ ಕೊಟ್ಟಿದ್ದಾರೆಂಬ ಆರೋಪ ಕೇಳಿಬಂದಿದೆ.

ಸರ್ಕಾರದ ಸಕ್ಷಮ ಪ್ರಾಧಿಕಾರದ ಹುಲ್ಲುಗಾವಲು ಜಮೀನನ್ನು ಪರಿವರ್ತನೆಗೊಳಿಸಿ, ಅನಧಿಕೃತವಾಗಿ ಜಮೀನಿನ ದಾಖಲೆಗಳನ್ನು ಸೃಸ್ಟಿಸಿಕೊಂಡು ಮನೆ ನಿರ್ಮಿಸಿದ್ದಾರೆ. ಅಲ್ಲದೇ ಸುಮಾರು 20,61,509 ರೂ. ಸಹಾಯ ಧನವನ್ನು ಸರ್ಕಾರಿ ಸ್ವಾಮ್ಯದ ಹುಲ್ಲುಗಾವಲು ಪ್ರದೇಶದಲ್ಲಿ ಮನೆ ಕಟ್ಟಿಕೊಳ್ಳಲು ಮಂಜೂರು ಕೂಡ ಮಾಡಲಾಗಿದೆ.
ಈ ಪ್ರಕರಣದಲ್ಲಿ 6 ಜನ ಪಿಡಿಓಗಳು ಮತ್ತು ಮಾಜಿ ಅಧ್ಯಕ್ಷರು, ಖೊಟ್ಟಿ ದಾಖಲೆ ಸೃಷ್ಟಿಸಿ ಸರ್ಕಾರದ ಅಂದಾಜು 20,61,500 ಹಣವನ್ನು ಮಂಜೂರುಗೊಳಿಸಿ, ಫಲಾನುಭವಿಗಳಿಗೆ ಹಂಚಿದ್ದಾರೆ. ಸರ್ಕಾರದ ಹಣವನ್ನು ಅನಧಿಕೃತ ನಿವೇಶನಗಳನ್ನು ನಿರ್ಮಿಸಲು ಕಾರಣೀಕೃತರಾದವರಿಗೆ ಕರ್ನಾಟಕ ಭೂಕಂದಾಯ ಅಧಿನಿಯಮದಡಿ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎನ್.ಕಾಂಬಳೆ ದೂರು ನೀಡಿದ್ದಾರೆ.