ಹಾವೇರಿ : ನದಿಯಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲಾದ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಕಳಸೂರಿನ ವರದಾ ನದಿಯಲ್ಲಿ ನಡೆದಿದೆ. ಮೃತ ಯುವಕನ್ನ 25 ವರ್ಷದ ಮಹೇಶ್ ಸೂರಣಗಿ ಎಂದು ಗುರುತಿಸಲಾಗಿದೆ.
ಹಾವೇರಿಯ ಪುರದ ಓಣಿಯಲ್ಲಿರುವ ಪೆಂಡಾಲ್ ಕಂಪನಿಯಲ್ಲಿ ಮಹೇಶ್ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸಂಕ್ರಾಂತಿ ಹಿನ್ನೆಲೆಯಲ್ಲಿ ಕಳಸೂರಿನ ವರದಾ ನದಿಗೆ ಸ್ಥಳೀಯರ ಜೊತೆ ತೆರಳಿದ್ದ. ಈ ಸಂದರ್ಭದಲ್ಲಿ ನದಿಯಲ್ಲಿ ಈಜಲು ತೆರಳಿದ್ದಾಗ ಸಾವನ್ನಪ್ಪಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕದಳ, ಪೊಲೀಸರು ಮತ್ತು ಸ್ಥಳೀಯರು ಶವ ಪತ್ತೆಗೆ ಮುಂದಾಗಿದ್ದರು. ಆದರೆ ಸಂಜೆಯವರೆಗೂ ಶವ ಪತ್ತೆಯಾಗಿರಲಿಲ್ಲ. ಕೊನೆಗೆ ತೆಪ್ಪದಲ್ಲಿ ತೆರಳಿದ ಸ್ಥಳೀಯರು ತೀವ್ರ ಹುಡುಕಾಟ ನಡೆಸಿ ಪತ್ತೆ ಹಚ್ಚಿದ್ದಾರೆ. ಮೃತದೇಹ ಕಂಡ ಮಹೇಶ ಪೋಷಕರ ಅಕ್ರಂದನ ಮುಗಿಲು ಮುಟ್ಟಿತ್ತು.
ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.