ಹಾವೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಬಿಸಿಯೂಟ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ವೇಳೆ ಕಾರ್ಯಕರ್ತೆಯೊಬ್ಬರು ಅಸ್ವಸ್ಥಗೊಂಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಲಲಿತಾ ಸುರೇಶ ಜಲ್ಲಾಪುರ್ ಅಸ್ವಸ್ಥಗೊಂಡ ಬಿಸಿಯೂಟ ಕಾರ್ಯಕರ್ತೆ.
ಖಾಯಂಮಾತಿ, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ಕಾರ್ಯಕರ್ತೆಯರು, ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ಅಕ್ಷರದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ನೂರಾರು ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಲಲಿತಾ ಎಂಬುವವರ ಆರೋಗ್ಯದಲ್ಲಿ ಏರುಪೇರಾಗಿ ಕುಸಿದಬಿದ್ದಿದ್ದಾರೆ. ಅವರು ತಕ್ಷಣ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಿಭಟನೆಯನ್ನು ಉಳಿದ ಬಿಸಿಯೂಟ ಕಾರ್ಯಕರ್ತೆಯರು ಮುಂದುವರೆಸಿದ್ದಾರೆ.
ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ್ ಮಾತನಾಡಿ, "ಹಾವೇರಿ ಜಿಲ್ಲೆಯಲ್ಲಿ 2002 -3ನೇ ಸಾಲಿನಲ್ಲಿ ಅಕ್ಷರ ದಾಸೋಹ ಬಿಸಿಯೂಟ ಜಾರಿಗೆ ಬಂತು. ಮುಖ್ಯ ಅಡುಗೆಯವರಾಗಿ 3900ಕ್ಕಿಂತ ಅಧಿಕ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಇವರಿಗೆ ನಿವೃತ್ತ ವೇತನ ಇಎಸ್‌ಐ ಸೇರಿದಂತೆ ವಿವಿಧ ಸೌಲಭ್ಯಗಳಿಲ್ಲ. ಈ ಕುರಿತಂತೆ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಗೊಂಡಿದ್ದೇವೆ. ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ನಡೆಸುವುದಾಗಿ" ತಿಳಿಸಿದರು.
ಇದನ್ನೂ ಓದಿ: ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರ ಮರುನೇಮಕಕ್ಕೆ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ